ದೇಶ

ನನ್ನ ಜತೆ ಮಾತನಾಡುತ್ತಿದ್ದಾಗಲೇ ಅವರು ಹುತಾತ್ಮರಾದರು: ಮೃತ ಯೋಧನ ಪತ್ನಿಯ ನೋವಿನ ನುಡಿ

ಕಾನ್ಪುರ,ಫೆ.16-ನನ್ನ ಜತೆ ಮಾತನಾಡುತ್ತಿದ್ದಾಗಲೇ ಉಗ್ರರ ದಾಳಿ ನಡೆಯಿತು. ಅವರು ಹುತಾತ್ಮರಾದರು ಎಂದು ಕಣ್ಣೀರಾಕುತ್ತಾರೆ ಯೋಧ ಪ್ರದೀಪ್ ಸಿಂಗ್ ಯಾದವ್ ಅವರ ಪತ್ನಿ ನೀರಜ್.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿರುವ ಸೈನಿಕರಲ್ಲಿ ಕನೌಜ್ ಜಿಲ್ಲೆಯ ಅದನ್ ಸುಖಸೇನಾಪುರ ಗ್ರಾಮದ ನಿವಾಸಿ ಪ್ರದೀಪ್ ಸಿಂಗ್ ಯಾದವ್ ಸಹ ಒಬ್ಬರು.

ಪುಲ್ವಾಮಾದಲ್ಲಿ ನಡೆದ ಘಟನೆ ವೇಳೆ ನೀರಜ್ ಪತಿಯೊಂದಿಗೆ ಮಾತನಾಡುತ್ತಿದ್ದರು. ‘ನಾನು ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ಇದ್ದಕ್ಕಿದ್ದಂತೆ ದೊಡ್ಡ ಶಬ್ಧ ಕೇಳಿಸಿತು. ತಕ್ಷಣ ಫೋನ್ ಕಟ್ ಆಯಿತು. ಇದರ ಬಳಿಕ ನನ್ನ ಬದುಕು ಮುಗಿದು ಹೋಯಿತು. ಬಹುದೊಡ್ಡ ಅಪಾಯವೇನೋ ಆಗಿದೆ ಎಂಬ ಆತಂಕ ಶುರುವಾಯಿತು. ನಾನು ಅವರು ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಲೇ ಇದ್ದೆ. ಆದರೆ ಎಲ್ಲವೂ ನನ್ನ ಆಶಯಕ್ಕೆ ವಿರುದ್ಧವಾಗಿತ್ತು. ಸ್ವಲ್ಪ ಸಮಯದಲ್ಲಿಯೇ ಸಿಆರ್‌ಪಿಎಫ್ ಮುಖ್ಯ ಕಾರ್ಯಾಲಯದಿಂದ ಬಾಂಬ್ ಸ್ಫೋಟದಲ್ಲಿ ಅವರು ಇಲ್ಲವಾದರು ಎಂಬ ಸುದ್ದಿ ಬಂತು’ ಎಂದು ಹೇಳಿವಾಗ ನೀರಜ್ ಅವರ ದುಖಃದ ಕಟ್ಟೆ ಒಡೆದಿತ್ತು.

ನನ್ನ ಪತಿಗೆ ಕಿರಿಯ ಮಗಳು ಸೋನಾ ಅಂದರೆ ಪ್ರಾಣ. ಕೊನೆಯದಾಗಿ ಮಾತನಾಡುವಾಗ ಸಹ ಅವರು ಆಕೆಯ ಬಗ್ಗೆಯೇ ಮಾತನಾಡುತ್ತಿದ್ದರು. ಅವರ ಮಾತಲ್ಲಿ 10 ನಿಮಿಷ ಅವಳೇ ಇದ್ದಳು ಎನ್ನುತ್ತಾರೆ ನೀರಜ್.

ಆಕೆ ಪತಿಯೊಂದಿಗೆ ಮಾತನಾಡುತ್ತಿದ್ದಳು. ಇದ್ದಕ್ಕಿದ್ದಂತೆ ಫೋನ್ ಕಟ್ ಆಯಿತು. ಆಕೆ ಜೋರಾಗಿ ಕಿರುಚಿದಳು. ಸಿಆರ್‌ಪಿಎಫ್ ಕಾರ್ಯಾಲಯದಿಂದ ಫೋನ್ ಕರೆ ಬಂದ ಮೇಲೆ ಆತ ಹುತಾತ್ಮನಾಗಿರುವುದು ಖಚಿತವಾಯ್ತು ಎಂದು ಸೈನಿಕನ ಸಂಬಂಧಿಗಳು ಹೇಳಿದ್ದಾರೆ.

ಆ ಸಂದರ್ಭದಲ್ಲಿ ನೀರಜ್ ತನ್ನಿಬ್ಬರು ಮಕ್ಕಳಾದ ಸುಪ್ರಿಯಾ (10 ) ಮತ್ತು ಸೋನಾ (2) ರೊಂದಿಗೆ ತವರಿನಲ್ಲಿದ್ದಳು. ಮತ್ತೀಗ ಆಕೆ ಪತಿಯ ಮನೆಗೆ ಮರಳಿದ್ದಾಳೆ. ಆಕೆಯ ಪತಿಯ ಶವ ಇಂದು ಅಲ್ಲಿಗೆ ತಲುಪುವ ಸಂಭವವಿದೆ.

ಪ್ರದೀಪ್ ಚಿಕ್ಕಮ್ಮನ ಮಗ ಸೋನು ಹೇಳುತ್ತಾರೆ, ನಮ್ಮ ಅಣ್ಣನ ಬಲಿದಾನದ ಬಗ್ಗೆ ಹೆಮ್ಮೆ ಇದೆ. ಆದರೆ ನಮಗೆ ಒಳಗೊಳಗೆ ಆಕ್ರೋಶವಿದೆ. ಸರ್ಕಾರದಿಂದ ನಾವು ಅದನ್ನೇ ಬಯಸುತ್ತಿದ್ದು ಆತಂಕವಾದಿಗಳ ವಿರುದ್ಧ ಸಾಧ್ಯವಾದಷ್ಟು ಬೇಗ ಪ್ರತೀಕಾರ ತೀರಿಸಿಕೊಳ್ಳಬೇಕಿದೆ. ನಮಗೀಗ ಕ್ರಮ ಬೇಕು. ಭರವಸೆ ಅಲ್ಲ ಎಂದಿದ್ದಾರೆ.

ಆತನೊಬ್ಬ ಒಳ್ಳೆಯ ವಿದ್ಯಾರ್ಥಿಯಾಗಿದ್ದು, ಸದಾ ದೇಶ ಸೇವೆಗೆ ಧುಮುಕುವ ಮಾತನ್ನಾಡುತ್ತಿದ್ದ ಎಂದು ಪ್ರದೀಪ್ ಶಿಕ್ಷಕರು ತಮ್ಮ ವಿದ್ಯಾರ್ಥಿಯನ್ನು ನೆನಪಿಸಿಕೊಂಡರು. (ಎಂ.ಎನ್)

Leave a Reply

comments

Related Articles

error: