ಮೈಸೂರು

ಭಾವನೆಯನ್ನು ಯಾವ ಚಳವಳಿ-ಆಂದೋಲನಗಳು ನೀಡಲು ಸಾಧ್ಯವಿಲ್ಲ : ನಟ ಬಾಬು ಹಿರಣಯ್ಯ

ಮೈಸೂರು,ಫೆ.16:-  ಭಾವನೆಯನ್ನು ಯಾವ ಚಳವಳಿ-ಆಂದೋಲನಗಳು ನೀಡಲು ಸಾಧ್ಯವಿಲ್ಲ ಎಂದು ರಂಗಕರ್ಮಿ,ಕಿರುತೆರೆ ಮತ್ತು ಚಲನಚಿತ್ರ ನಟ ಬಾಬು ಹಿರಣಯ್ಯ ತಿಳಿಸಿದರು.

ಅವರಿಂದು ಕರಾಮುವಿ ಘಟಿಕೋತ್ಸವ ಸಭಾಭವನದಲ್ಲಿ ಅಖಿಲಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮತ್ತು ವಿದ್ಯಾರ್ಥಿ ಪಥ ಸಹಯೋಗದೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಪುನರ್ ನಿರ್ಮಾಣಕ್ಕಾಗಿ ವಿದ್ಯಾರ್ಥಿ ಸಂಸ್ಕೃತಿ ಚಳವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮೊನ್ನೆಯ ಘಟನೆಯನ್ನು ನೆನೆದರೆ ಮೌನ ತಾಳುತ್ತೇವೆ. ಮೌನದ ಹಿಂದೆ ಯಾವುದು ಕೊರತೆಯಾಗುತ್ತಿದೆ. ಯಾವುದಕ್ಕಾಗಿ ನಡೆಯುತ್ತಿದೆ. ಸಂಸ್ಕೃತಿಯಲ್ಲಿ, ಕಲಿಯಲ್ಲಿ ಹಿಂದಿದ್ದೇವಾ? ಸಮಾಜದ ಬಗ್ಗೆ ಹಿತದೃಷ್ಟಿಯ ಬಗ್ಗೆ ದೃಷ್ಟಿಕೋನ ಬದಲಾಗಿದೆಯಾ? ವಿದ್ಯಾರ್ಥಿಗಳಿಂದ ಚಳವಳಿ ಆರಂಭವಾಗಬೇಕಾ? ವಿದ್ಯಾರ್ಥಿಗಳ ದಿಸೆಯಿಂದ ರಾಷ್ಟ್ರದ ಮುನ್ನುಡಿಯಾಗಬೇಕಾ ಎಂಬ ಚಿಂತನೆ ನಡೆಸಬೇಕು ಎಂದರು. ಇಂದು ಆದ ಘಟನೆ ಇಂದು ಹಸಿರಿರತ್ತೆ, ನಾಳೆ ನಾವದನ್ನು ಮರೆತೇ ಬಿಡುತ್ತೇವೆ. ಮತ್ತೆ ನೆನಪಾಗಲು ಮತ್ತದೇ ಪ್ರಸಂಗ ಮರುಕಳಿಸಬೇಕು ಆಗ ಮತ್ತೆ ಜಾಗೃತರಾಗುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ವಾಮಿ ವಿವೇಕಾನಂದರು ಜಪಾನ್ ಗೆ ಹೋದಾಗ ಅವರ ಪ್ರವಚನದ ನಂತರ ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಆಗತ್ತೆ. ಬಳಿಕ ಆಹಾರ ಸ್ವೀಕರಿಸಲು ಹೇಳಿದಾಗ  ಉಪವಾಸ ಎಂದು ಹೇಳುತ್ತಾರೆ. ಬಲವಂತ ಮಾಡಿದಾಗ ಎರಡು ಬಾಳೆಯ ಹಣ್ಣು ತಂದುಕೊಡಲು ಹೇಳುತ್ತಾರೆ. ಚಿಕ್ಕ ಬಾಲಕನನ್ನು ಕಳಿಸಲಾಗತ್ತೆ. ಅಂಗಡಿಗಳೆಲ್ಲ ಮುಚ್ಚಿದ್ದ ಕಾರಣ ಬಾಳೆಯ ಮಂಡಿಯ ವರ್ತಕನ ಬಳಿಯಿಂದ ಮೂರ್ನಾಲ್ಕು ಮೈಲಿದೂರದಿಂದ ಬಾಳೆಯ ಹಣ್ಣು ತಂದ ಬಾಲಕನಲ್ಲಿ  ಸ್ವಾಮಿ ವಿವೇಕಾನಂದರು, ಅಷ್ಟು ದೂರದಿಂದ ನನಗೋಸ್ಕರ ಬಾಳೆಯ ಹಣ್ಣು ತಂದಿದ್ದೀಯ, ನಿನಗೆ ಕೊಡಲು ನನ್ನ ಬಳಿ ಏನೂ ಇಲ್ಲ. ನನ್ನ ದೇಶ ಶ್ರೀಮಂತವಾದ ಭಾರತ. ಅಲ್ಲಿಗೆ ಹೋದ ಬಳಿಕ ನಿನಗೇನು ಬೇಕಾದರೂ ಕಳಿಸುತ್ತೇನೆ ಏನು ಬೇಕು ಕೇಳು ಎಂದಾಗ ಬಾಲಕ ನೀವು ಬೇರೆ ಬೇರೆ ದೇಶಗಳಲ್ಲಿ ಪ್ರವಚನ ನೀಡುತ್ತೀರಿ, ಭಾರತ ಅಷ್ಟೇ ಅಲ್ಲ  ಎಲ್ಲಿ ಹೋದರೂ  ಇಲ್ಲಿ ನಾನು ಬಾಳೆಯ ಹಣ್ಣು ತಡವಾಗಿ ತಂದುಕೊಟ್ಟಿದ್ದನ್ನು ಹೇಳುವ ಮೂಲಕ ನನ್ನ ರಾಷ್ಟ್ರವನ್ನು ಅವಮಾನ ಮಾಡಬೇಡಿ ಎಂದು ಮನವಿ ಮಾಡಿದ್ದನಂತೆ. ಅವನಲ್ಲಿನ ರಾಷ್ಟ್ರಪ್ರೇಮ ವ್ಯಕ್ತವಾಗಿತ್ತು. ಭಾವನೆಯನ್ನು ಯಾವ ಚಳವಳಿ, ಆಂದೋಲನ ನೀಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದರು.  ಒಂದಾದ ನಂತರ ಒಂದು ಪೆಟ್ಟು ತಿನ್ನುತ್ತ ಬೆಳೆದರೆ ದೇವರಾಗುತ್ತೇವೆ. ಬೀಚಿಯವರು ಒಮ್ಮೆ ಹೇಳಿದ್ದರು, ಎರಡೇ ಜಾತಿ ಇರೋದು, ಒಂದು ಸತ್ತಂತೆ ಬದುಕಿರುವವರು, ಇನ್ನೊಂದು ಸತ್ತ ಮೇಲೆ ಬದುಕಿರುವವರು. ಸತ್ತ ಮೇಲೆ ಬದುಕಿರುವವವರ ಸಾಲಿನಲ್ಲಿ ಕುವೆಂಪು, ಮಾಸ್ತಿ, ಅನಕೃ ಮೊದಲಾದ ಮಹನೀಯರು ನಿಲ್ಲುತ್ತಾರೆ. ಆದರೆ ಸತ್ತಂತೆ ಬದುಕಿರುವವರಲ್ಲಿ ಮುಕ್ಕಾಲು ಪಾಲು ಸರ್ಕಾರಿ ಅಧಿಕಾರಿಗಳಿರುತ್ತಾರೆ. ಸಾಧನೆಯ ಹಾದಿಯ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗದೇ ತಿಂಗಳ ಸಂಬಳವನ್ನಷ್ಟೇ ಎಣಿಸುತ್ತಾರೆ ಎಂದು ಉದಾಹರಿಸಿದ್ದರು ಎಂದು ಸ್ಮರಿಸಿದರು.

ಸಾಧನೆಯ ಹಾದಿಯನ್ನು ನಾವೇ ಕಂಡುಕೊಳ್ಳಬೇಕು. ಗುರಿ ಸೇರಲು ಮಾರ್ಗ ಹಲವಾದರೂ ಪ್ರಶಸ್ತವಾಗಿರಬೇಕು. ಈ ಹಾದಿಯಲ್ಲಿ ನಾವು ಕಾಣುವ ಹೆಜ್ಜೆ ಗುರುತುಗಳು ಸಾಧನೆಗೆ ಮಾರ್ಗವಾಗಬೇಕು. ಗುರಿಯಿಟ್ಟು ಗುರುವನ್ನು ಸ್ಮರಿಸಿ ಮುಂದಡಿಯಿಡಬೇಕು. ‘ಸಾಧಕರ ಪುಸ್ತಕಗಳೇ ಇಂದಿನ ವಿದ್ಯಾರ್ಥಿಗಳಿಗೆ ಗುರು’ ಧಾರವಾಹಿ, ಟಿವಿ ಪ್ರಪಂಚದಲ್ಲಿ ಓದುವುದನ್ನು ಮರೆಯುತ್ತಿದ್ದೇವೆ. ಓದುವುದರಿಂದ ಶಕ್ತಿ, ಚೈತನ್ಯ ಸಿಗತ್ತೆ. ಅರಿಷಡ್ವರ್ಗಗಳನ್ನು ಮೆಟ್ಟಿ ನಿಂತಾಗ ಸಾಧನೆ ಸುಲಭ. ಮನೋರಂಜನೆ ಮನಸ್ಸಿಗೆ ಅಗತ್ಯ. ಅದರ ಜೊತೆ ಮನೋವಿಕಾಸವೂ ಮುಖ್ಯ. ಭಾವಗಳ ಮೂಲಕ ಮನೋವಿಕಾಸ ಸಾಧ್ಯ. ಇಲ್ಲಿ ಹಚ್ಚಿದ ದೀಪ ಇಲ್ಲಷ್ಟೇ ಬೆಳಗದೇ ಮನೆ-ಮನಗಳನ್ನು ಬೆಳಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರಾಮುವಿ ಕುಲಪತಿ ಡಾ.ಶಿವಲಿಂಗಯ್ಯ, ಅಭಾವಿಪ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್.ರಘುನಂದನ್, ಸೆನೆಟ್ ಸದಸ್ಯ ಡಾ.ಚಂದ್ರಶೇಖರ್, ಅಭಾವಿಪ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ರಾಜ್ಯಾಧ್ಯಕ್ಷ ಡಾ.ಅಲ್ಲಮಪ್ರಭು ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: