ಮೈಸೂರು

ದಂಡ ವಿಧಿಸುವುದು ಆದಾಯಕ್ಕಲ್ಲ; ಜೀವ ರಕ್ಷಣೆಯೇ ಮೊದಲ ಆದ್ಯತೆ: ಡಿಸಿಪಿ ಎಚ್‍ಟಿ ಶೇಖರ್

ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರಿಗೆ ದಂಡ ವಿಧಿಸುವುದು ಅರಿವು ಮೂಡಿಸುವ ಸಲುವಾಗಿಯೇ ಹೊರತು, ಪೊಲೀಸ್ ಇಲಾಖೆ ಆದಾಯಕ್ಕಲ್ಲ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಹೆಚ್.ಟಿ.ಶೇಖರ್ ತಿಳಿಸಿದರು.

ನಗರದ ಜೆ.ಕೆ.ಮೈದಾನದಲ್ಲಿರುವ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ  ಮೈಸೂರು ನಗರ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ 28ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಡಿ ‘ರಸ್ತೆ ಸುರಕ್ಷತೆ ಮತ್ತು ಜೀವ ರಕ್ಷಕ ಅಮೂಲ್ಯ ಸಮಯ’ದ ಬಗ್ಗೆ ಅರಿವು ಹಾಗೂ ಸಂಚಾರ ನಿಯಮ ಜಾಗೃತಿ ಮೂಡಿಸುವ ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆ ಸರ್ಕಾರಕ್ಕೆ ಆದಾಯ ತಂದುಕೊಡುವ ಇಲಾಖೆಯಲ್ಲ. ಬದಲಾಗಿ ಸಾರ್ವಜನಿಕರ ಜೀವ ರಕ್ಷಣೆ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶ ಹೊಂದಿದೆ ಎಂದರು. ಅಲ್ಲದೇ ದೇಶದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಅಪಘಾತಗಳಿಂದ ಮೃತ ಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.  ಆದ್ದರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರಿಗೆ ದಂಡ ವಿಧಿಸುವ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮೈಸೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಕೃಷ್ಣಮೂರ್ತಿ ಮಾತನಾಡಿ, ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಯುವಕರೇ ಮೃತಪಡುತ್ತಿದ್ದಾರೆ. ಅಪಘಾತವಾದಾಗ ಗಾಯಾಳುವಿಗೆ ಚಿಕಿತ್ಸೆ ನೀಡಲು ಪ್ರತಿ ಸೆಕೆಂಡ್ ಕೂಡ ಮುಖ್ಯವಾಗಿದ್ದು, ವೈದ್ಯರು ಮತ್ತು ದಾದಿಯರು ತಕ್ಷಣ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ರುದ್ರಮುನಿ, ಬಿ.ವಿ ಕಿತ್ತೂರ, ಸಂಚಾರ ವಿಭಾಗದ ಎಸಿಪಿ ಕೆ.ಎನ್.ಮಾದಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವೈದ್ಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು. ದೇವರಾಜ ಸಂಚಾರ ಠಾಣಾ ಇನ್ಸ್ಪೆಕ್ಟರ್ ಸಂದೇಶಕುಮಾರ್ ಕಿರುಚಿತ್ರದ ಬಗ್ಗೆ ಮಾಹಿತಿ ನೀಡಿದರು.

Leave a Reply

comments

Related Articles

error: