ದೇಶಪ್ರಮುಖ ಸುದ್ದಿ

5, 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ: ಸಂಸತ್ತಲ್ಲಿ ಮಂಡಿಸಲು ಸಿದ್ಧವಾಗಿದೆ ಹೊಸ ಕರಡು

ಮುಂದಿನ ಶೈಕ್ಷಣಿಕ ವರ್ಷ 2017-18ರಿಂದ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲು ರಾಜ್ಯಗಳಿಗೆ ಅವಕಾಶ ಕಲ್ಪಿಸುವುದಕ್ಕಾಗಿ ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಹೊಸ ಮಸೂದೆ ಮಂಡಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಿದ್ಧತೆ ನಡೆಸಿದೆ.

ನವದೆಹಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾನವ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, ‘ಮಸೂದೆ ಅಂಗೀಕಾರವಾಗುವ ವಿಶ್ವಾಸ ಇದೆ. ಕನಿಷ್ಠ ಕಲಿಕಾ ಕರಡಿನ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೇಳಿದ್ದೇವೆ. ಜನರಿಂದ ಬಂದಿರುವ ಸಲಹೆಗಳನ್ನು ಪರಿಗಣಿಸಿ 15 ದಿನಗಳಲ್ಲಿ ಕರಡನ್ನು ಅಂತಿಮಗೊಳಿಸಲಾಗುವುದು. ಈ ನಿಯಮಗಳು ಶಿಕ್ಷಣದ ಹಕ್ಕು ಕಾಯ್ದೆ(ಆರ್.ಟಿ.ಇ)ಯ ಭಾಗವಾಗಿರಲಿದೆ. ಅವುಗಳನ್ನು ಪಾಲಿಸಲೇಬೇಕು. ಪರಿಷ್ಕೃತ ನಿಯಮಗಳು ಮಾರ್ಚ್ ಒಳಗಾಗಿ ಜಾರಿಗೆ ಬರಲಿದೆ’ ಎಂದು ಹೇಳಿದರು.

ಶಿಕ್ಷಣದ ಹಕ್ಕು ಕಾಯ್ದೆಯ ಅಡಿಯಲ್ಲಿ ಬರುವ ‘ಅನುತ್ತೀರ್ಣ ರಹಿತ ನೀತಿ’ ಗೆ ತಿದ್ದುಪಡಿ ತರುವ ಮಸೂದೆ ಇದಾಗಿದ್ದು, ಸಂಸತ್ತಿನಲ್ಲಿ ಇದು ಅಂಗೀಕಾರಗೊಂಡರೆ ಬಹುತೇಕ ರಾಜ್ಯಗಳ 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಬೇಕಾದರೆ ವಾರ್ಷಿಕ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕು. ಈ ಕಾಯ್ದೆಯನ್ನು ಅನುಷ್ಠಾನ ಮಾಡುವ ಹಾಗೂ ಮಾಡದಿರುವ ನಿರ್ಧಾರವನ್ನು ರಾಜ್ಯ ಸರ್ಕಾರಗಳೇ ತೆಗೆದುಕೊಳ್ಳಬಹುದಾಗಿದೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ವಿವಿಧ ರಾಜ್ಯಗಳು ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಪ್ರಾಥಮಿಕ ಶಿಕ್ಷಣದ ಪ್ರತಿ ತರಗತಿಗಳಲ್ಲಿ (1 ರಿಂದ 8) ಕನಿಷ್ಠ ಕಲಿಕೆ (ಗಣಿತ, ಪರಿಸರ ಅಧ್ಯಯನ, ವಿಜ್ಞಾನ, ಹಿಂದಿ, ಇಂಗ್ಲಿಷ್ ಮತ್ತು ಉರ್ದು) ಎಷ್ಟಿರಬೇಕು ಎಂಬ ಬಗ್ಗೆ ಕರಡನ್ನು ಸಿದ್ಧಪಡಿಸಿದೆ.

ಮಸೂದೆಯ ಕರಡು ಸಿದ್ಧವಾಗಿದ್ದು, ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡಿಸಲಿದ್ದೇವೆ. ಮಸೂದೆ ಅಂಗೀಕಾರವಾದ ನಂತರ, 5 ಮತ್ತು 8 ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯಗಳಿಗೆ ಸಿಗಲಿದೆ. ಒಂದು ವೇಳೆ ಪರೀಕ್ಷೆಯಲ್ಲಿ ವಿದ್ಯಾರ್ಥಿ ಅನುತ್ತೀರ್ಣಗೊಂಡರೆ, ಜೂನ್ ನಲ್ಲಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ ಎಂದು ಜಾವಡೇಕರ್ ಮಾಹಿತಿ ನೀಡಿದರು.

Leave a Reply

comments

Related Articles

error: