ದೇಶಪ್ರಮುಖ ಸುದ್ದಿ

ದಾಖಲೆ ಕೇಳದೆ ವಿಮೆ ಹಣ ಬಿಡುಗಡೆ ಮಾಡಿದ ಎಲ್‌ಐಸಿ: ಮಂಡ್ಯ ಹುತಾತ್ಮ ಯೋಧನ ಕುಟುಂಬಕ್ಕೆ ನೆರವು

ಮಂಡ್ಯ (ಫೆ.16): ಪುಲ್ವಾಮಾದಲ್ಲಿ ವೀರಮರಣವಪ್ಪಿದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ಭಾರತೀಯ ಜೀವ ವಿಮಾ ನಿಗಮ ತಕ್ಷಣ ವಿಮಾ ಮೊತ್ತವನ್ನು ತಲುಪಿಸಿದೆ. ಯಾವುದೇ ದಾಖಲೆ, ಮರಣ ಪ್ರಮಾಣ ಪತ್ರವನ್ನೂ ಕೇಳದೆ ಎಲ್‍ಐಸಿ ಮಂಡ್ಯ ಬ್ರಾಂಚ್ ನಿಂದ ನಾಮಿನಿ ಖಾತೆಗೆ 3,82,199 ರೂ ವಿಮೆ ಮರಣದಾವೆ ಮೊತ್ತವನ್ನು ನೀಡಿದೆ.

ಯಾವುದೇ ದಾಖಲೆಯನ್ನೂ ಕೇಳದೆ ಎಲ್‍ಐಸಿ ಹಣ ನೀಡಿದೆ. ಪಾಲಿಸಿ ನಂ.725974544 ರಲ್ಲಿ ಯೋಧ ಗುರು ವಿಮೆ ಮಾಡಿಸಿದ್ದು, ಅವರು ಹುತಾತ್ಮರಾಗಿದ್ದ ವಿಚಾರ ತಿಳಿಯುತ್ತಿದ್ದಂತೆ ನಾಮಿನಿ ಖಾತೆಗೆ ಹಣ ವರ್ಗಾವಣೆ ಮಾಡಿದೆ. ಎಲ್‌ಐಸಿ ಕಾರ್ಯಕ್ಕೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವೀರಯೋಧ ಗುರು ಅವರ ಪಾರ್ಥಿವ ಶರೀರ ಬರಲಿದೆ. ಅಂತಿಮ ವಿಧಿ ವಿಧಾನಗಳು ಮಂಡ್ಯದಲ್ಲಿ ನಡೆಯಲಿದೆ. ಮಂಡ್ಯದ ಕೆಎಂ ದೊಡ್ಡಿ ಸೇರಿದಂತೆ ಹಲವು ಕಡೆ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಮಂಡ್ಯದ ವೀರಯೋಧನ ಗುರು ಕುಟುಂಬಕ್ಕೆ ಬಿಬಿಎಂಪಿಯು 14 ಲಕ್ಷ ರೂ ಸಹಾಯ ಧನ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 42 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಅದರಲ್ಲಿ ಮಂಡ್ಯ ಮೂಲದ ಗುರು ಕೂಡ ಒಬ್ಬರು. ಪಂಜಾಬ್ ಸರ್ಕಾರವು ಪುಲ್ವಾಮಾ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ರಾಜ್ಯದ ನಾಲ್ಕು ಸೈನಿಕರ ಕುಟುಂಬಕ್ಕೆ 12 ಲಕ್ಷ ರೂ ಪರಿಹಾರವನ್ನು ಘೋಷಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಒಡಿಶಾದ ಜವಾನರ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರವನ್ನು ಘೋಷಿಸಿದೆ. ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಈ ಹಿಂದೆ ಭಾವಿಸಿದ್ದಂತೆ 350 ಕೆಜಿ ಸ್ಫೋಟಕವಿಲ್ಲ ಬದಲಾಗಿ 60 ಕೆಜಿ ಆರ್‌ಡಿಎಕ್ಸ್ ಬಳಸಲಾಗಿತ್ತು ಎಂಬ ಮಾಹಿತಿ ಸಿಆರ್‌ಪಿಎಫ್ ಅಧಿಕಾರಿಗಳ ಮೂಲಗಳು ತಿಳಿಸಿವೆ. (ಎನ್.ಬಿ)

Leave a Reply

comments

Related Articles

error: