ಪ್ರಮುಖ ಸುದ್ದಿ

ಹೊರ ರಾಜ್ಯದ ಕಾರ್ಮಿಕರ ಗಡಿಪಾರಿಗೆ ತುಳುವೆರ ಜನಪದ ಕೂಟ ಆಗ್ರಹ

ರಾಜ್ಯ(ಮಡಿಕೇರಿ) ಫೆ.17 : – ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಿಂದ ಹತ್ಯೆಗೀಡಾದ ವಿದ್ಯಾರ್ಥಿನಿ ಸಾವಿನ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ತುಳುವೆರ ಜನಪದ ಕೂಟದ ಜಿಲ್ಲಾ ಘಟಕ, ಮುಂದಿನ 15 ದಿನಗಳೊಳಗೆ ಹೊರ ರಾಜ್ಯದ ಕಾರ್ಮಿಕರನ್ನು ಗಡಿಪಾರು ಮಾಡದಿದ್ದಲ್ಲಿ ವಿವಿಧ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಶಾಂತಿ ಸಾಮರಸ್ಯಕ್ಕೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದೇ ಕಾರಣವೆಂದು ಆರೋಪಿಸಿದರು.

ದೊಡ್ಡ ದೊಡ್ಡ ತೋಟಗಳು, ರೆಸಾರ್ಟ್, ಹೊಟೇಲ್ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡಿದ್ದರೆ. ಎಲ್ಲಾ ಮಾಲೀಕರುಗಳು ಪೊಲೀಸ್ ಇಲಾಖೆಗೆ ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ನೀಡದೆ ಇರುವುದರಿಂದ ಮುಂದೊಂದು ದಿನ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ತಕ್ಷಣ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಕಡಿಮೆ ವೇತನ ನೀಡಿ ಹೆಚ್ಚು ದುಡಿಸಿಕೊಳ್ಳುವುದಕ್ಕಾಗಿ ಹೊರ ರಾಜ್ಯಗಳ ಕಾರ್ಮಿಕರನ್ನು ಮಾಲೀಕರುಗಳು ನಿಯೋಜಿಸಿಕೊಳ್ಳುತ್ತಿದ್ದಾರೆ. ಅಪರಿಚಿತ ಕಾರ್ಮಿಕರಿಂದ ಕುಕೃತ್ಯಗಳು ನಡೆಯುತ್ತಿರುವುದಕ್ಕೆ ಇತ್ತೀಚಿಗೆ ಹತ್ಯೆಯಾದ ವಿದ್ಯಾರ್ಥಿನಿ ಪ್ರಕರಣವೇ ಸಾಕ್ಷಿಯಾಗಿದೆ. ಈ ರೀತಿಯ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಅವುಗಳು ಬೆಳಕಿಗೆ ಬರುತ್ತಿಲ್ಲವೆಂದು ಪಿ.ಎಂ. ರವಿ ಆರೋಪಿಸಿದರು.

ಹೊರ ರಾಜ್ಯದ ಕಾರ್ಮಿಕರು ಸ್ಥಳೀಯ ಕಾರ್ಮಿಕ ಯುವತಿಯರನ್ನು ಮದುವೆಯಾಗಿ ನಂತರ ಹೆಂಡತಿ ಮಕ್ಕಳನ್ನು ತೊರೆದು ಪರಾರಿಯಾಗುತ್ತಿರುವ ಪ್ರಕರಣಗಳು ನಡೆಯುತ್ತಿವೆ. ವಲಸೆ ಕಾರ್ಮಿಕರಿಂದ ಅಪಾಯವಿದೆ ಎಂದು ತಿಳಿದಿದ್ದರೂ ಎಸ್ಟೇಟ್ ಮಾಲಿಕರುಗಳು ಸಾಲ ಸೌಲಭ್ಯದೊಂದಿಗೆ ಇನ್ನಿತರ ಎಲ್ಲಾ ಸೌಲಭ್ಯಗಳನ್ನು ನೀಡಿ ಪೋಷಿಸುತ್ತಿದ್ದಾರೆ ಎಂದು ಆರೋಪಿಸಿದ ರವಿ ಜನಪ್ರತಿನಿಧಿಗಳು ಕೂಡ ವಲಸೆ ಕಾರ್ಮಿಕರಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.

ವಿದ್ಯಾರ್ಥಿನಿಯ ಹತ್ಯೆ ಪ್ರಕರಣದಂತೆ ಮುಂದಿನ ದಿನಗಳಲ್ಲಿ ಅಪರಾಧಗಳು ನಡೆದಲ್ಲಿ ಅದಕ್ಕೆ ತೋಟದ ಮಾಲಿಕರೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೂಟದ ಜಿಲ್ಲಾಧ್ಯಕ್ಷ ಶೇಖರ್ ಬಂಡಾರಿ ಮಾತನಾಡಿ, ವಿದ್ಯಾರ್ಥಿನಿಯ ಕೊಲೆ ಅಮಾನವೀಯ ಕೃತ್ಯವಾಗಿದ್ದು, ಮೃತಳ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಘಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷ ಬಿ.ವೈ.ಆನಂದ ರಘು ಮಾತನಾಡಿ, ಹೊರ ರಾಜ್ಯಗಳ ಕಾರ್ಮಿಕರಿಗೆ ರೆಷನ್ ಕಾರ್ಡ್, ಐಡಿ ಕಾರ್ಡ್, ಆಧಾರ್ ಕಾರ್ಡ್ ಗಳನ್ನು ಏಜೆಂಟರುಗಳ ಮೂಲಕ ಮಾಡಿಸಿಕೊಡಲಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಲಸೆ ಕಾರ್ಮಿಕರು ತೋಟದ ಮಾಲೀಕರುಗಳ ಮೇಲೆ ಹಲ್ಲೆ ನಡೆಸುವಷ್ಟು ಮುಂದುವರೆದಿದ್ದು, ಇನ್ನಾದರು ಮಾಲೀಕರು ಎಚ್ಚೆತ್ತುಕೊಳ್ಳಬೇಕೆಂದ ಅವರು ವಿದ್ಯಾರ್ಥಿನಿಯನ್ನು ಹತ್ಯೆಗೈದ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾದ ಕೊಡಗು ಪೊಲೀಸರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಡಿ.ನಾಣಯ್ಯ ಹಾಗೂ ನಗರಾಧ್ಯಕ್ಷೆ ವಿಜಯಲಕ್ಷ್ಮಿ ರವಿ ಶೆಟ್ಟಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: