ಪ್ರಮುಖ ಸುದ್ದಿ

ಸೇವಾ ಭಾರತಿಯಿಂದ ಇಂದು ದೇವಸ್ತೂರು ಗ್ರಾಮದಲ್ಲಿ ವೈದ್ಯಕೀಯ ಶಿಬಿರ

ರಾಜ್ಯ(ಮಡಿಕೇರಿ) ಫೆ.17 :- ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ ಪ್ರಾಕೃತಿಕ ವಿಕೋಪದಲ್ಲಿ ಸಿಲುಕಿ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರಿಗೆ ಕೊಡಗು ಜಿಲ್ಲಾ ಸೇವಾ ಭಾರತಿ ನಿರಂತರವಾಗಿ ತನ್ನ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಬರುತ್ತಿದ್ದು, ಇದರ ಭಾಗವಾಗಿ ಫೆ.17(ಇಂದು)ರಂದು ಗಾಳಿಬೀಡು ಗ್ರಾಪಂನ ದೇವಸ್ತೂರು ಗ್ರಾಮದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು  ಆಯೋಜಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇವಾ ಭಾರತಿ ಕಾರ್ಯದರ್ಶಿ ಕೆ.ಕೆ.ಮಹೇಶ್‍ಕುಮಾರ್, ವೈದ್ಯಕೀಯ ಶಿಬಿರವನ್ನು ಕಾಲೂರು, ದೇವಸ್ತೂರು, ಹೆಬ್ಬೆಟ್ಟಗೇರಿ, ಮುಕ್ಕೋಡ್ಲು, ಮೇಘತ್ತಾಳು ಸುತ್ತಮುತ್ತಲ ಗ್ರಾಮಗಳ ಸಂತ್ರಸ್ತರ ಆರೋಗ್ಯ ಸಂರಕ್ಷಣೆಗಾಗಿ ಹಮ್ಮಿಕೊಳ್ಳಲಾಗಿದೆ. ಶಿಬಿರ ಬೆಳಗ್ಗೆ 9.30ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ ಎಂದರು.

ಶಿಬಿರವನ್ನು ಮಡಿಕೇರಿ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರಾದ ಡಾ. ಪ್ರವೀಣ್, ಶಸ್ತ್ರ ಚಿಕಿತ್ಸಕರಾದ ಡಾ. ಅಭಿನಂದನ್, ಕೀಲು ಮತ್ತು ಮೂಳೆ ರೋಗ ತಜ್ಞರಾದ ಡಾ. ಶ್ರೀಧರ್, ಮಾನಸಿಕ ರೋಗ ತಜ್ಞರಾದ ಡಾ. ಸತೀಶ್ ಕುಮಾರ್, ಶುಶ್ರೂಷಕರಾದ ಡಾ. ಸೂರ್ಯಕುಮಾರ್, ಡಾ. ನವೀನ್ ಮತ್ತು ಸಿಬ್ಬಂದಿಗಳ ತಂಡ ನಡೆಸಿಕೊಡಲಿದ್ದಾರೆ. ಔಷಧಿಯನ್ನು ಸ್ಥಳದಲ್ಲಿಯೇ ವಿತರಿಸಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಸೇವಾ ಭಾರತಿ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದೆಂದರು.

ಸೇವಾ ಭಾರತಿಯ ಕಾರ್ಯಾಲಯ ಕಾರ್ಯದರ್ಶಿ ಚಂದ್ರ ಉಡೋತ್ ಮಾತನಾಡಿ, ಇತ್ತೀಚೆಗೆ  ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಿಂದಲೆ ಸೇವಾ ಭಾರತಿ ಸಂಘಟನೆ,  ನಿರಾಶ್ರಿತರ ನೆರವಿಗೆ ಧಾವಿಸಿ ರಕ್ಷಣಾ ಕಾರ್ಯ ಮತ್ತು ಪುನರ್ವಸತಿ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಇದರೊಂದಿಗೆ ಬೆಂಗಳೂರಿನ ಯೂತ್ ಫಾರ್ ಸೇವಾ ಸಂಘಟನೆಯ ಸಹಕಾರದೊಂದಿಗೆ ಈಗಾಗಲೆ ಕಾಲೂರಿನಲ್ಲಿ 2 ಮನೆಗಳ ದುರಸ್ತಿ ಕಾರ್ಯ ನಡೆಸಿರುವುದಲ್ಲದೆ, ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಮತ್ತೊಂದು ಮನೆಯ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು.

ಹೊರ ಜಿಲ್ಲೆಯಲ್ಲಿ ಪದವಿ ಮೇಲ್ಪಟ್ಟು ಓದುತ್ತಿರುವ ನಿರಾಶ್ರಿತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗಬಾರದೆಂದು 28 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ.  ಇವರಲ್ಲಿ 9 ಮಂದಿ ಇಂಜಿನಿಯರ್ ವಿದ್ಯಾರ್ಥಿಗಳು, 1 ಡೆಂಟಲ್ ವಿದ್ಯಾರ್ಥಿ, 1 ನರ್ಸಿಂಗ್ ವಿದ್ಯಾರ್ಥಿ ಹಾಗೂ 17 ಮಂದಿ ಪದವಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು ಇರುವುದಾಗಿ ಮಾಹಿತಿ ನೀಡಿದರು.

ಸೇವಾ ಭಾರತಿ ಸಲಹೆಯಂತೆ ಪುತ್ತೂರಿನ ಶ್ರೀ ವಿವೇಕಾನಂದ ಕಾಲೇಜಿನಲ್ಲಿ ಜಿಲ್ಲೆಯ 22 ಮಂದಿ ನಿರಾಶ್ರಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಸೇವಾ ಭಾರತಿಯ ಖಜಾಂಚಿ ಡಿ.ಕೆ.ಶಿವಾಜಿ ಹಾಗೂ ಸದಸ್ಯ ಅಜಿತ್ ಕುಕ್ಕೆರ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: