ಪ್ರಮುಖ ಸುದ್ದಿ

ಕೊಡಗು ಗೌಡ ಸಮಾಜಗಳ ಒಕ್ಕೂಟದಿಂದ ಸಂತ್ರಸ್ತರಿಗೆ ಆರ್ಥಿಕ ನೆರವು : 13 ಲಕ್ಷ ವಿತರಣೆ

ರಾಜ್ಯ(ಮಡಿಕೇರಿ) ಫೆ.17 :-ಕೊಡಗು ಗೌಡ ಸಮಾಜ ಬೆಂಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇವರ ಸಹಕಾರದೊಂದಿಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಹಯೋಗದಲ್ಲಿ ಕೊಡಗು ಪ್ರಕೃತಿ ವಿಕೋಪ 206 ಸಂತ್ರಸ್ತರಿಗೆ 13 ಲಕ್ಷ ರೂ. ಆರ್ಥಿಕ ನೆರವನ್ನು ನಗರದ ಗೌಡ ಸಮಾಜದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಗೌಡ ಸಮಾಜದ ಅಧ್ಯಕ್ಷೆ ಅಮೆ ಸೀತಾರಾಮ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸುದ್ದಿ ಕೇಳಿದೊಡನೆ ಬೆಂಗಳೂರು ಗೌಡ ಸಮಾಜ ಕಾರ್ಯಪ್ರವೃತ್ತವಾಗಿ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ರು.9 ಲಕ್ಷ ಹಣವನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿಸಿದರು.

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೀಡುವ ಆರ್ಥಿಕ ಪರಿಹಾರವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನ ಮಟ್ಟವನ್ನು ಹೆಚ್ಚಿಸಬೇಕೆಂದು ನಮ್ಮ ಆಶಯ. ಮುಂದಿನ ದಿನಗಳಲ್ಲೂ ಗೌಡ ಸಮಾಜದ ವತಿಯಿಂದ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ ಪ್ರಕೃತಿ ವಿಕೋಪಕ್ಕೆ ಒಳಗಾದ ಕೊಡಗು ಜಿಲ್ಲೆಯ ಜನತೆಗೆ ಪರಿಹಾರ ಮೊತ್ತವನ್ನು ಗೌಡ ಸಮಾಜಗಳ ಒಕ್ಕೂಟದಿಂದ ಜಾತ್ಯಾತೀತವಾಗಿ ಈಗಾಗಲೇ ರೂ.30 ಲಕ್ಷದಷ್ಟು ಮೊತ್ತವನ್ನು ಪ್ರಥಮ ಹಂತವಾಗಿ ವಿತರಿಸಲಾಗಿದೆ ಎಂದು ತಿಳಿಸಿದರು.

ಇದೀಗ ಕೊಡಗು ಗೌಡ ಸಮಾಜ ಬೆಂಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇವರ ಸಹಕಾರದೊಂದಿಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಹಯೋಗದಲ್ಲಿ ಪರಿಹಾರಧನ ವಿತರಣಾ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಗೌಡ ಸಮಾಜದ ಕಾರ್ಯದರ್ಶಿ ಚೊಕ್ಕಾಡಿ ಅಪ್ಪಯ್ಯ, ಕೊಂಬನ ಪ್ರವೀಣ್, ಪ್ರಮುಖರಾದ ರಾಜೇಶ್, ಕೊಡಗು ಗೌಡ ಯುವ ವೇದಿಕೆ ಸದಸ್ಯರು ಮತ್ತಿತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: