ಮೈಸೂರು

ಫೆಬ್ರವರಿಯಲ್ಲಿ ನಡೆಯುವ ಸ್ವದೇಶಿ ಮೇಳ ಸಣ್ಣ ಕೈಗಾರಿಕೆಗಳಿಗೆ ಪೂರಕ: ಎನ್.ಆರ್.ಮಂಜುನಾಥ್

ಸಣ್ಣ ಹಾಗೂ ಗುಡಿ ಕೈಗಾರಿಕೆಗಳ ಉತ್ತೇಜನ ಹಾಗೂ ಸ್ವದೇಶಿ ವಸ್ತುಗಳ ತಯಾರಕ ಹಾಗೂ ವಿತರಕರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಸ್ವದೇಶಿ ಮೇಳವನ್ನು ಆಯೋಜಿಸಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್‍ನ ರಾಜ್ಯ ಸಂಯೋಜಕ ಎನ್.ಆರ್.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಮಾತನಾಡಿದ ಅವರು, ಸ್ವದೇಶಿ ಜಾಗರಣ ಮಂಚ್‍ನಿಂದ ಮುಂದಿನ ತಿಂಗಳು ಫೆಬ್ರವರಿ 3ರಿಂದ 5ರ ವರೆಗೆ ಮೂರು ದಿನಗಳ ಕಾಲ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಸ್ವದೇಶಿ ಮೇಳ’ವನ್ನು ಆಯೋಜಿಸಲಾಗಿದೆ. ಮೈಸೂರಿಗರಷ್ಟೇ ಅಲ್ಲದೇ ಕರ್ನಾಟಕದ ಎಲ್ಲ ಸ್ವದೇಶಿ ಉತ್ಪಾದಕರು ಮೇಳದಲ್ಲಿ ಪಾಲ್ಗೊಳ್ಳಬಹುದು. ಸಾವಯುವ ಕೃಷಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಸಾವಯುವ ರೈತರಿಗೆ ಉಚಿತ ಮಳಿಗೆಯನ್ನು ನೀಡಲಾಗುವುದು. ಮಧ್ಯವರ್ತಿಗಳ ಹಾವಳಿ ತಡೆಯಲು ಹಾಗೂ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಬಗ್ಗೆ  ಹಲವಾರು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದ್ದು ರೈತರು, ಸಣ್ಣ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆದಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜನಚೇತನ ಟ್ರಸ್ಟ್ ಅಧ್ಯಕ್ಷ ಹಾಗೂ ಮೇಳದ ಸಂಯೋಜಕ ಪ್ರಸನ್ನ ಎನ್. ಗೌಡ ಮಾತನಾಡಿ, ಮೇಳದ ದ್ವಾರದಲ್ಲಿ ರೈತರ ಸಾವಯುವ ಹಾಗೂ ರಾಸಾಯನಿಕ ಮುಕ್ತ ಆಹಾರ ಧಾನ್ಯಗಳು, ನಾಟಿ ಹಸುವಿನ ಹಾಲು, ತುಪ್ಪ, ತರಕಾರಿ, ಸೊಪ್ಪುಗಳು ಹಾಗೂ ದೇಶಿ ಆಹಾರ ಪ್ರದರ್ಶನ ಮಾಡುವ ರೈತರ ಸಂತೆ ಆಯೋಜಿಸಲಾಗಿದೆ. ಆರ್ಯುವೇದ ಶಿಬಿರಗಳು, ಪ್ರಬಂಧ, ಚಿತ್ರಕಲೆ, ದೇಶಭಕ್ತಿ ಗೀತೆ ಸ್ಪರ್ಧೆಗಳು ನಡೆಯಲಿವೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಸೂಕ್ತ ಮಾರುಕಟ್ಟೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ಸ್ವಯಂ ಉದ್ಯೋಗಾಕಾಂಕ್ಷಿಗಳಿಗೆ ನುರಿತ ತಜ್ಞರೊಡನೆ ಸಂವಾದ ಮತ್ತು ಜಾಗೃತಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಫೆ.3ರಂದು “ಭಾರತಕ್ಕೆ ವಿದೇಶಿ ಬಂಡವಾಳ : ಭ್ರಮೆ ಮತ್ತು ವಾಸ್ತವ” ವಿಷಯದ ಕುರಿತು ಪ್ರೊ.ಬಿ.ಎಂ.ಕುಮಾರಸ್ವಾಮಿ, 4ರಂದು “ಚೈನಾ ಆಕ್ರಮಣ” ಪ್ರತಾಪ್ ಸಿಂಗ್ ಬೆಳಗೆರೆ ಹಾಗೂ ಫೆ.5ರಂದು “ಸ್ವದೇಶಿ ಆಂದೋಲನದ ಮಹತ್ವ”ವನ್ನು ಕೆ.ಜಗದೀಶ್ ತಿಳಿಸಿಕೊಡುವರು. ಮೇಳದಲ್ಲಿ ಭಾಗವಹಿಸುವರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಂತ ಸಂಘಟಕ ಕೆ.ಜಗದೀಶ್, ಶ್ರೀವತ್ಸ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: