ಮೈಸೂರು

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು: ಸಾ.ರಾ. ನಂದೀಶ್

ಮೈಸೂರು, ಫೆ.17:-  ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಅಲ್ಲಿನ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾ.ರಾ ನಂದೀಶ್ ಹೇಳಿದರು.
ನಿನ್ನೆ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 20 ಅಂಶಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಜಿಲ್ಲಾ ಪ್ರಗತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಲವಾರು ಪುಣ್ಯಕ್ಷೇತ್ರಗಳಿದ್ದು ಅಲ್ಲಿ ನಡೆಯುವ ಜಾತ್ರಾ ಸಮಾರಂಭಗಳ ಸಮಯದಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿ ಬರುವ ಭಕ್ತಾಧಿಗಳಿಗೆ ನೆರವಾಗಬೇಕು ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ಹೇಳಿದರು.
ಚೆಸ್ಕಾಂ ಅಧಿಕಾರಿಗಳು ಹಳ್ಳಿಗಳಲ್ಲಿ ಹಲವಾರು ಮನೆಗಳ ಮೇಲೆಯೇ ವಿದ್ಯುತ್ ಸಂಪರ್ಕ ಹಾದು ಹೋಗಿರುತ್ತದೆ ಹಾಗಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಗ್ರಾಮ ಸಭೆಗಳಿಗೆ ಹೋಗಿ ಅಲ್ಲಿನ ಸ್ಥಿತಿಗತಿಗಳನ್ನು ನೋಡಿಕೊಂಡು ಮನೆ ನಿರ್ಮಾಣಕ್ಕೂ ಮೊದಲೇ ವಿದ್ಯುತ್ ಸಂಪರ್ಕಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಾಲು ಉತ್ಪಾದಕರಿಗೆ ಸರಿಯಾದ ನಿಟ್ಟಿನಲ್ಲಿ ಪ್ರೋತ್ಸಾಹಧನ ಸಿಗುವ ಕಾರ್ಯಗಳು ನಡೆಯಬೇಕು, ಪ್ರತಿಯೊಬ್ಬ ರೈತನು ಗುಣಮಟ್ಟದ ಹಾಲು ನೀಡುತ್ತಿದ್ದು ಅಂತಹ ರೈತನಿಗೆ ಪ್ರೋತ್ಸಾಹಧನ ತಲುಪಿಸುವ ಯೋಜನೆಗಳು ಸಹಕಾರ ಸಂಘವು ಮಾಡಬೇಕಿದೆ ಪ್ರತಿಯೊಂದು ಡೈರಿಗಳಿಗೆ ಗುಣಮಟ್ಟ ಹಾಲನ್ನು ನೀಡುವ ರೈತರ ಮಾಹಿತಿಯನ್ನು ಒದಗಿಸುವಂತೆ ಕ್ರಮ ಕೈಗೊಳ್ಳಿ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯು ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು ಹಾಗೂ ಬಿಸಿಯೂಟದ ವ್ಯವಸ್ಥೆಯಲ್ಲಿ ಶುಚಿತ್ವ ಕಾಪಾಡಲು ಅಧಿಕಾರಿಗಳಿಗೆ ಸಭೆ ಮಾಡಿ ತಿಳಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ ಮೃತ ರೈತರ ಕುಟುಂಬಗಳಿಗೆ ಸೂಕ್ತ ಸಮಯದಲ್ಲಿ ನೆರವನ್ನು ನೀಡಬೇಕು ಅವರ ಸಂಪೂರ್ಣ ಮಾಹಿತಿಯನ್ನು ತಿಳಿದು ಒಂದು ತಿಂಗಳೊಳಗೆ ಪರಿಹಾರ ಸಿಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ಕೊಟ್ಟರು.
ಎಲ್ಲಾ ಇಲಾಖೆಯವರು ಅನುದಾನಗಳನ್ನು ಸರಿಯಾದ ನಿಟ್ಟಿನಲ್ಲಿ ಯಾವ ಯಾವ ಯೋಜನೆಗಳಿಗೆ ಬಳಸಲಾಗಿದೆ ಎಂಬ ಮಾಹಿತಿಯನ್ನು ಆಯಾ ತಿಂಗಳಿನಲ್ಲೇ ದಾಖಲಾತಿಯೊಂದಿಗೆ ಮೇಲಾಧಿಕಾರಿಗಳಿಗೆ ತಲುಪಿಸಬೇಕು ಹಾಗೂ ಮುಂದಿನ ಸಭೆಯಲ್ಲಿ ಸೂಕ್ತ ಮಾಹಿತಿಗಳನ್ನು ತೆಗೆದುಕೊಂಡು ಬರಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಚುತಾನಂದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಉಪಸ್ಥಿತರಿದ್ದರು.       (ಎಸ್.ಎಚ್)

Leave a Reply

comments

Related Articles

error: