ಮೈಸೂರು

ಯಶಸ್ವಿ ಆಡಳಿತಕ್ಕೆ ಪಂಚಸೂತ್ರ ಅಳವಡಿಸಿಕೊಳ್ಳುವುದು ಅತ್ಯಗತ್ಯ : ಕೆ.ಜೈರಾಜ್

ಮೈಸೂರು, ಫೆ.17:-  ಅಧಿಕಾರಿಗಳು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ಉತ್ಸುಕತೆ,ಚೈತನ್ಯಶೀಲತೆ, ಅನುಷ್ಠಾನ, ಪರಾನುಭೂತಿ ಹಾಗೂ ನೈತಿಕತೆಯಂತಹ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ರಾಜ್ಯ ಸರ್ಕಾರದ ನಿವೃತ್ತ ಅಪರ ಮುಖ್ಯ  ಕಾರ್ಯದರ್ಶಿ ಕೆ.ಜೈರಾಜ್ ಹೇಳಿದರು.
ಆಡಳಿತ ತರಬೇತಿ ಸಂಸ್ಥೆಯ ಹೇಮಾವತಿ ಸಭಾಂಗಣದಲ್ಲಿ 176 ಹಾಗೂ 177 ನೇ ಸಾಮಾನ್ಯ ಬುನಾದಿ ತರಬೇತಿ ತಂಡಗಳ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಲಾಗಿದ್ದ  ವಿಶೇಷ  ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಡಳಿತಕ್ಕೆ ಉತ್ಸುಕತೆ, ಚೈತನ್ಯ ತುಂಬಿ , ಅಭಿವೃದ್ಧಿ ಕಾರ್ಯಗಳನ್ನು ಕಾನೂನಿನ ಚೌಕಟ್ಟಿನೊಳಗೆ ಅನುಷ್ಠಾನಗೊಳಿಸುವ ಸಾಮಥ್ರ್ಯ ಬೆಳೆಸಿಕೊಳ್ಳುವದರ ಜೊತೆಗೆ, ಇತರರ ವಿಚಾರ, ಅಭಿಪ್ರಾಯಗಳನ್ನೂ ಕೂಡ ಅರಿತುಕೊಳ್ಳುವ ಗುಣ ಮತ್ತು ನೈತಿಕತೆ  ಅಳವಡಿಸಿಕೊಂಡರೆ ಯಶಸ್ವಿ ಆಡಳಿತಾಧಿಕಾರಿಗಳಾಗಲು ಸಾಧ್ಯ .
ಸೇವೆಗೆ ಸೇರಿದ ಆರಂಭಿಕ ವರ್ಷಗಳಲ್ಲಿಯೇ ನಮ್ಮ ಜವಾಬ್ದಾರಿಗಳನ್ನು ಅರಿತು ವೃತ್ತಿಯಲ್ಲಿ ಪ್ರಭುತ್ವ ಸಾಧಿಸಿದರೆ ಇತರರು ನಿಮ್ಮನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಕೆಲಸ ಮಾಡುವ ಇಲಾಖೆ, ಊರಿನಲ್ಲಿ ಗೌರವಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕರ್ತವ್ಯ ನಿರ್ವಹಣೆಗೆ ವೈಯುಕ್ತಿಕವಾಗಿ ಸ್ಪಷ್ಟ ಕ್ರಿಯಾಯೋಜನೆ ಹಾಕಿಕೊಳ್ಳಬೇಕು. ಸಮಯ ನಿರ್ವಹಣೆ, ಆದ್ಯತೆಯಲ್ಲಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು, ಸರ್ಕಾರದ ಕೆಲಸಗಳಲ್ಲಿ ಭಾಗಿದಾರರನ್ನು ಒಳಪಡಿಸಿಕೊಂಡು ನಿರಂತರ ಕಲಿಕೆ ಮತ್ತು  ಸುಧಾರಣೆ ಸಾಧಿಸಬಹುದು. ಮುಂಬರುವ ಇಪ್ಪತ್ತು ವರ್ಷಗಳಲ್ಲಿ ಕಾರ್ಯ ನಿರ್ವಹಣೆಯ ವಿಧಾನ ಸಂಪೂರ್ಣ ಬದಲಾಗಲಿದೆ.ಈಗಾಗಲೇ ಅಮೇರಿಕದಲ್ಲಿ ರೊಬೋಟ್ ತಂತ್ರಜ್ಞಾನ ಬಳಸಿಕೊಂಡು ತ್ವರಿತವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಭಾರತಕ್ಕೂ ಈ ಸಂದರ್ಭ ಬರುವ ದಿನಗಳು ದೂರವಿಲ್ಲ, ವೇಗ ಮತ್ತು ತಾಂತ್ರಿಕ ಕೌಶಲಗಳನ್ನು ನಾವು ಆರಂಭದಲ್ಲಿಯೇ ರೂಢಿಸಿಕೊಳ್ಳಬೇಕು ಎಂದರು.
ಅಮೇರಿಕಾದ ವಿದ್ಯುಚ್ಛಕ್ತಿ ಸಂಸ್ಥೆಯೊಂದಿಗೆ ಸಂಪರ್ಕ ಸಾಧಿಸಿ, ಕರ್ನಾಟಕದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದು, ಸರ್ಕಾರದ ಕೆಲಸ ಕಾರ್ಯಗಳನ್ನು ಸಾರ್ವಜನಿಕರಿಗೆ  ಕಾಲಮಿತಿಯೊಳಗೆ ಸಿಗಬೇಕು ಎಂಬ ವಿಚಾರ ಬಂದಾಗ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ,ಅಧ್ಯಯನ ಕೈಗೊಂಡು ಕರ್ನಾಟಕದಲ್ಲಿ ಸಕಾಲ ಯೋಜನೆ ಅನುಷ್ಠಾನಕ್ಕೆ .ನಗರಾಡಳಿತ ಇಲಾಖೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೊಳಿಸುವ ಮೂಲಕ ನಿರಂತರವಾಗಿ ಆಡಳಿತಕ್ಕೆ ಹೊಸತನ ತರುವ ಪ್ರಯತ್ನ  ಮಾಡಿದ ಅನುಭವಗಳನ್ನು ಹಂಚಿಕೊಂಡರು.
ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳು, ಸಂದೇಹಗಳಿಗೆ ಪರಿಹಾರ ಸೂಚಿಸಿದರು.
ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ, ತರಬೇತಿ ಸಂಯೋಜನಾಧಿಕಾರಿಗಳಾದ ಡಾ.ಎಂ.ಹರೀಶ, ಡಾ.ಕ್ರಿಸ್ಟಿನಾ ಕಾಂತರಾಜು, ಶ್ರೀನಿವಾಸ ಹೊನ್ನಗನಹಟ್ಟಿ,  ಮತ್ತಿತರರು ಇದ್ದರು.
ಡಾ.ಶೃತಿ, ತನುಜ ಸಿ.ಎನ್. ಹಾಗೂ ಮಂಜುಳ ಪ್ರಾರ್ಥಿಸಿದರು. ಮಂಜುನಾಥ ಡೊಳ್ಳಿನ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಪಲ್ಲವಿ ಹೊನ್ನಾಪುರ ನಿರೂಪಿಸಿದರು. ಆರ್.ವಂದನಾ ವಂದಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: