ಮೈಸೂರು

ಕುಂಭಮೇಳದಲ್ಲಿ ಮತದಾನದ ಅರಿವು ಕಾರ್ಯಕ್ರಮ

ಮೈಸೂರು, ಫೆ.17:-  ಭಾನುವಾರದಿಂದ ತಿರುಮಕೂಡಲು ಶ್ರೀ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ಮಹಾ ಕುಂಭಮೇಳದಲ್ಲಿ  ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಹಿನ್ನಲೆಯಲ್ಲಿ   ಅವರಿಗೆ ಮತದಾನ ಜಾಗೃತಿ ಮೂಡಿಸಲು ತಿ.ನರಸೀಪುರ ತಾಲ್ಲೂಕು ಸ್ವೀಪ್ ವತಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಟಿ.ನರಸೀಪುರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ವೀಪ್ ಅಧಿಕಾರಿಗಳು ಕುಂಭಮೇಳ ಆವರಣದಲ್ಲಿ ಜಾಗೃತಿ ಮೂಡಿಸಿದರು.
ಯಾವುದೇ ಮತದಾರರು ಮತದಾನದಿಂದ ಹೊರಗುಳಿಯಬಾರದು. ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗೆ ಬೆಂಬಲಿಸೋಣ ಎಂಬುದು 2019 ರ ಚುನಾವಣೆಯ ಘೋಷ ವಾಕ್ಯವಾಗಿದೆ. ಮತದಾನ ನಿಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಜನರಿಗೆ ತಿಳಿಸಿದರು.
ಎಲ್ ಇಡಿ ವಾಹನದಲ್ಲಿ ಮತದಾನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಪ್ರದರ್ಶಿಸಿ, ಕುಂಭಮೇಳಕ್ಕೆ ಪಾಲ್ಗೊಂಡಿದ್ದ ಜನರಿಗೆ ಅಧಿಕಾರಿಗಳು ಮತದಾನಕ್ಕೆ ಸಂಬಂಧಿಸಿದ ಕರಪತ್ರಗಳನ್ನು ನೀಡಿ ಮತದಾನದ ಮಹತ್ವವನ್ನು ತಿಳಿಸುತ್ತಿದ್ದರು.
ಭಾನುವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರಗೆ  ಎರಡು ಪಾಳಿಯಲ್ಲಿ ಗ್ರಾಮ  ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರು ಹಾಗೂ ಇನ್ನಿರ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು.
ಟಿ.ನರಸೀಪುರ ತಾಲೂಕು ತಹಶೀಲಾರ್ ನಾಗ ಪ್ರಶಾಂತ್, ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಎಸ್ ನಂಜೇಶ್  ಹಾಗೂ ಸಹಾಯಕ ನಿರ್ದೇಶಕ ನಿಂಗಯ್ಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಮತ್ತು ಸ್ವಾಮಿರಾವ್ ಹಾಗೂ  ಸ್ವೀಪ್ ಅಧಿಕಾರಿಗಳು ಕುಂಭಮೇಳ ಆವರಣದಲ್ಲಿ ಜನರಿಗೆ ಕರ ಪತ್ರ ನೀಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: