ಮೈಸೂರು

ರಸ್ತೆ ಸುರಕ್ಷತೆಗೆ ಪ್ರತಿಕ್ಷಣವೂ ಎಚ್ಚರಿಕೆಯಿಂದಿರಬೇಕು: ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್

ರಸ್ತೆ ಸುರಕ್ಷತೆ ಎನ್ನುವುದು ಪ್ರತಿದಿನದ ಆಚರಣೆಯಾಗಬೇಕು. ಇದು ವರ್ಷವಿಡೀ ಆಚರಿಸುವ ಮೂಲಕ ಅಳವಡಿಸಿಕೊಳ್ಳಬೇಕಾದ ವಿಷಯ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ಸುಬ್ರಹ್ಮಣ್ಯೇಶ್ವರ ರಾವ್ ಅವರು ತಿಳಿಸಿದರು.

ಮೈಸೂರು ನಗರ ಪೊಲೀಸ್ ವತಿಯಿಂದ ಆಯೋಜಿಸಲಾಗಿದ್ದ 28ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಅವರು ಮಾತನಾಡುತ್ತಿದ್ದರು. ತಪ್ಪು ಮಾಡಲು ಹಾಗೂ ಎಚ್ಚರಿಕೆ ತಪ್ಪಲು ಒಂದೇ ಸೆಕೆಂಡ್ ಸಾಕು. ಅಪಘಾತವಾದರೆ ಮಾತ್ರ ಇಡೀ ಜೀವನದಲ್ಲಿ ನಾವು ಕಷ್ಟ ಅನುಭವಿಸಬೇಕಾಗುತ್ತದೆ ಎಂದರು.

ಒಂದು ವಾರ ಕಾಲ ಈ ಕಾರ್ಯಕ್ರಮ ಏರ್ಪಡಿಸಿದ್ದು, ಇಡೀ ವರ್ಷಕ್ಕೆ ಬೇಕಾಗುವ ಜಾಗೃತಿ-ಉತ್ಸಾಹ ತುಂಬುವ ಗುರಿ ನಮ್ಮದು. ಡಿಸಿಪಿಗಳು ಹಾಗೂ ಟ್ರಾಫಿಕ್ ಪೊಲೀಸರು ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದೇವೆ ಎಂದರು.

10ನೇ ತರಗತಿ ಹಾಗೂ ಪಿಯುಸಿ ಮಕ್ಕಳ ಕೈಗೆ ವಾಹನಗಳು ಸಿಗುತ್ತಿವೆ. ಹೀಗಾಗದಂತೆ ತಡೆಯುವುದು ಅಪ್ಪ-ಅಮ್ಮನ ಜವಾಬ್ದಾರಿಯಾಗಿದೆ. ಅವರಿಗೆ ವಾಹನಗಳನ್ನ ಕೊಡಬಾರದು. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಸಮಿತಿ ರಚಿಸಲಾಗುವುದು. ಸಾರ್ವಜನಿಕರಿಂದಲೇ ಮಾಹಿತಿ ಸಂಗ್ರಹಿಸಿ ಸಂಚಾರಕ್ಕೆ ಹೊಸ ನಿಯಮಾವಳಿಗಳನ್ನು ಅಳವಡಿಸಲು ಸಿದ್ಧತೆ ನಡೆಸಿದ್ದೇವೆ ಎಂದರು.

ರಕ್ತದಾನ ಶ್ರೇಷ್ಠ ದಾನ: ಶಾಸಕ ವಾಸು

ಸಮಾರಂಭದಲ್ಲಿ ಪಾಲ್ಗೊಂಡ ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರು ಮಾತನಾಡಿ, ಶ್ರೇಷ್ಠ ದಾನಗಳಲ್ಲಿ ರಕ್ತದಾನವೂ ಒಂದು. ಅಪಘಾತ ಸಂದರ್ಭದಲ್ಲಿ ಸರಿಹೊಂದುವ ಗುಂಪಿನ ರಕ್ತ ದೊರೆಯದೆ ಹಲವರು ಸಾವನ್ನಪ್ಪಿದ ಉದಾಹರಣೆ ಇದೆ. ರಕ್ತದಾನದಲ್ಲಿ ಇಂದು ಪೊಲೀಸರೆ ಪಾಲ್ಗೊಳ್ಳುವ ಮೂಲಕ ರಕ್ತದಾನದ ಮಹತ್ವ ಸಾರಿದ್ದಾರೆ ಎಂದರು.

ವಿದ್ಯಾವಂತರು-ಹಿರಿಯರೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ನಾನೂ 5 ವರ್ಷದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಆದರೆ ಅಪಘಾತ ಪ್ರಮಾಣ ಕಡಿಮೆ ಆಗಿಲ್ಲ. ಟ್ರಾಫಿಕ್ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ. ನಾನೂ ಸೇರಿದಂತೆ ವಾಹನ ಸವಾರರು ಪಾದಚಾರಿಗಳ ಸುರಕ್ಷತೆಯ ಬಗ್ಗೆ ಗಮನ ವಹಿಸುತ್ತಿಲ್ಲ. ಎಲ್ಲರ ಪ್ರಾಣ ಅಮೂಲ್ಯವಾದದ್ದು. ಪುಟಬಾತ್’ನಲ್ಲಿ ಪಾದಚಾರಿಗಳಿಗೆ ಆಗುತ್ತಿರುವ ತೊಂದರೆಗೆ ಪೊಲೀಸರು ಮಾತ್ರ ಹೊಣೆಯಲ್ಲ. ಪಾಲಿಕೆಯೂ ಜವಾಬ್ದಾರಿ ಹೊರಬೇಕು ಎಂದರು.

ಚಿತ್ರಕಲಾ ಸ್ಪರ್ಧೆ

ಸಂಚಾರಿ ನಿಯಮಗಳ ಅರಿವು ಕುರಿತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ 150ಕ್ಕೂ ಹೆಚ್ಚು ಮಕ್ಕಳಿಗೂ ವಾಸು ಶುಭಾಶಯ ಕೋರಿದರು.

ದೃಷ್ಟಿ ತಪಾಸಣೆ; ಕನ್ನಡ ವಿತರಣೆ

ಇದೇ ಸಂದರ್ಭ ವಾಹನ ಚಾಲಕರಿಗೆ ದೃಷ್ಟಿ ತಪಾಸಣೆ ಮಾಡಲಾಯಿತು. ದೃಷ್ಟಿ ದೋಷವಿದ್ದ 50 ಜನರಿಗೆ ಸಿದಾರ್ಥ ಟ್ರಾಫಿಕ್ ನಿಂದ ಕನ್ನಡಕ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರತ್ನ ಲಕ್ಷ್ಮಣ್, ಡಿಸಿಪಿ ಶೇಖರ್, ರುದ್ರಮುನಿ ಹಾಗೂ ಎಸಿಪಿ ಕೆ.ಎನ್. ಮಾದಯ್ಯ ಸೇರಿದಂತೆ ಇತರೆ ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡರು.

ಸಂಚಾರಿ ನಿಯಮಗಳ ಅರಿವು ಕುರಿತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳು.

Leave a Reply

comments

Related Articles

error: