ಕರ್ನಾಟಕ

ಹಾಸನ: ರೈತರ ಮೆಚ್ಚುಗೆ ಗಳಿಸಿದ ಕೃಷಿ ಮೇಳ

ಹಾಸನ (ಫೆ.18): ನಗರದಲ್ಲಿ ಫೆ.17ರಂದು ನಡೆದ ಜಿಲ್ಲಾ ಮಟ್ಟದ ಸಮಗ್ರ ಕೃಷಿ ಮೇಳ ರೈತರ ಮೆಚ್ಚುಗೆ ಗಳಿಸಿತು ಪ್ರಸ್ತುತ ದಿನಗಳಲ್ಲಿ ರೈತರಿಗೆ ಮುಂದಿನ ಹಂಗಾಮಿನಲ್ಲಿ ಬೆಳೆಯಬಹುದಾದ ಬೆಳೆಗಳು, ಕೃಷಿ, ತಾಂತ್ರಿಕತೆ, ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಅರಣ್ಯ ಗಿಡಗಳು, ಸಾಂಬಾರು ಹಾಗೂ ತೋಟಗಾರಿಕಾ ಬೆಳೆಗಳು, ಹೈನುಗಾರಿಕೆ, ಮೀನುಗಾರಿಕೆ ಪ್ರಾತ್ಯಕ್ಷಿಕ ಸಮಗ್ರ ತಾಂತ್ರಿಕತೆ ಮಾಹಿತಿ ಸಂವಾದ ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ರೈತರು, ರೈತ ಮಹಿಳೆಯರು, ಸಮಗ್ರ ಕೃಷಿಕರು ಮುಂತಾದ ಪ್ರಗತಿಪರ ರೈತರುಗಳಿಗೆ ಕೃಷಿ ವಿಜ್ಞಾನಿಗಳು, ತಂತ್ರಜ್ಞಾನರು ಹಾಗೂ ವಿವಿಧ ಇಲಾಖೆಗಳ ಅದಿಕಾರಿಗಳಿಂದ ಆಧುನಿಕ ತಾಂತ್ರಿಕತೆಗಳು, ಬೇಸಾಯ ತಂತ್ರಜ್ಞಾನ, ಹೊಸ ಹೊಸ ತಳಿಗಳ ಪರಿಚಯ, ಜೈವಿಕ ಇಂಧನ ಬೆಳೆಗಳು, ಜೇನು ಸಾಕಾಣಿಕೆ, ಹೈನುಗಾರಿಕೆ ಇತ್ಯಾದಿಗಳ ಬಗ್ಗೆ ತಾಂತ್ರಿಕ ಚರ್ಚೆ, ರೈತ – ಕೃಷಿ ವಿಜ್ಞಾನಿಗಳ ಸಂವಾದ ಆಯೋಜನೆಗೊಂಡಿತ್ತು.

ತಾಂತ್ರಿಕ ಚರ್ಚೆಯಲ್ಲಿ ಭಾಗವಹಿಸಿ ತಾಂತ್ರಿಕತೆಯನ್ನು ನೀಡಿದ ಕೃಷಿ ಮಹಾವಿದ್ಯಾಲಯದ ಡೀನ್‍ರಾದ ಡಾ. ಎನ್ ದೇವಕುಮಾರ್ ಅವರು ಮಾತನಾಡುತ್ತಾ ಪ್ರಪಂಚದಲ್ಲಿ 179 ದೇಶಗಳು ಸಾವಯವ ಕೃಷಿಯಲ್ಲಿ ತೊಡಗಿಕೊಂಡು 2004 ನೇ ಇಸವಿಯಿಂದ ಸಾವಯವ ಯೋಜನೆಗೆ ಒತ್ತು ನೀಡಲಾಗಿದ್ದು ಇದಕ್ಕೆ ಪೂರಕವಾಗಿ ಸರ್ಕಾರದಿಂದ ಲಭ್ಯವಿರುವ ವಿವಿಧ ಯೋಜನೆಗಳ ಲಾಭವನ್ನು ಪಡೆದು ರೈತರು ಹೆಚ್ಚಿನ ಆಧಾಯ ಗಳಿಸಿ ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡಲು ಸಲಹೆ ನೀಡಿದರು.

ಸಿರಿಧಾನ್ಯಗಳನ್ನು ಕಡಿಮೆ ಖರ್ಚು, ಕಡಿಮೆ ನೀರು ಹಾಗೂ ಕಡಿಮೆ ಅವಧಿಯಲ್ಲಿ ರೋಗ ರುಜಿನಗಳಿಲ್ಲದೆ ಬೆಳೆಯಬಹುದಾಗಿದ್ದು ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು ಇಂತಹ ಬೆಳೆಗಳ ಕಡೆಗೆ ಗಮನ ಹರಿಸಬೇಕೆಂದು ತಿಳಿಸಿದರು.

ತೋಟಗಾರಿಕ ಸಂಶೋದನೆ ಮತ್ತು ವಿಸ್ತರಣಾ ಕೇಂದ್ರ ಮುಖ್ಯಸ್ಥರಾದ ಅಮರನಂಜುಂಡೇಶ್ವರ ಅವರು ಮಾತನಾಡುತ್ತಾ ಆಲೂಗೆಡ್ಡೆ ಬೆಳೆಯ ಸಮಗ್ರ ಬೇಸಾಯ ಕ್ರಮಗಳು ಅವುಗಳಿಗೆ ಬರುವ ರೋಗ ಮತ್ತು ಕೀಟಗಳ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಿಳಸಿದರು.

ಈ ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ ಅವನಿ ಆರ್ಗಾನಿಕ್ಸ್, ಅರಣ್ಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಐ.ಸಿ.ಎ.ಆರ್-11ಹೆಚ್.ಆರ್ ಕಾಫಿ ಮಂಡಳಿ, ಸಾಂಬಾರ ಮಂಡಳಿ, ಕೆ.ವಿ.ಕೆ ಕಂದಲಿ, ಹಾಪ್‍ಕಾಮ್ಸ್ ಕೃಷಿ ಮಹಾವಿದ್ಯಾಲಯ ಹಾಸನ, ಜೈವಿಕ ಇಂಧನ ಉದ್ಯಾನ ಮಡೆನೂರು, ಕೃಷಿ ಯಂತ್ರೋಪಕರಣಗಳು, ರಸಗೊಬ್ಬರ, ಪೀಡೆನಾಶಕಗಳ ಮಳಿಗೆಗಳನ್ನು ತೆರೆದು ರೈತರಿಗೆ ಸಮಗ್ರವಾಗಿ ಮಾಹಿತಿಯನ್ನು ನೀಡಲಾಯಿತು.

ಇದೇ ವೇಳೆ ಕೃಷಿ ಮೇಳದಲ್ಲಿ ವಿವಿಧ ಕೃಷಿ ವಸ್ತು ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಜಿಲ್ಲಾಡಳಿತ ಹಾಗೂ ಕೃಷಿ, ತೋಟಗಾರಿಕೆ, ಪಶುಸಂಗೋಪನಾ ಅರಣ್ಯ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಗಳ ವತಿಯಿಂದ ಸಮಗ್ರ ಕೃಷಿ ಮೇಳವು ರೈತರಿಗೆ ಅನುಕೂಲಕರವಾದಂತಹ ಬಿತ್ತನೆ ಬೀಜಗಳು, ಕೃಷಿ ಯಂತ್ರೋಪಕರಣಗಳು, ರೇಷ್ಮೆಗೂಡುಗಳಿಂದ ತಯಾರಾದಂತಹ ಕರಕುಶಲಗಳು ವಸ್ತು ಪ್ರದರ್ಶನಗಳು ಆಕರ್ಷಣೀಯವಾಗಿದ್ದವು.

ರೈತರ ಪರವಾಗಿ ಸಾಕಷ್ಟು ರೀತಿಯ ಕಾಳಜಿಯನ್ನು ವಹಿಸಿಕೊಂಡು ರೈತರನ್ನು ಹುರಿದುಂಬಿಸುವ ಸಲುವಾಗಿ ಐ.ಸಿ.ಎ.ಆರ್. ರಿಸರ್ಚ ಸೆಂಟರ್ ಬೆಂಗಳೂರಿನಿಂದ, ಕೃಷಿ ಇಲಾಖೆಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಪಡಿಕೆಯ ಯಂತ್ರೋಪಕರಣಗಳೂ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಗಳಿಂದ ತಂಡಗಳು ಆಗಮಿಸಿದ್ದವು ಸುಮಾರು 70 ಕ್ಕೂ ಅಧಿಕ ಪ್ರದರ್ಶನ ಮಳಿಗೆಗಳು ರೈತ ಪರವಾದಂತಹ ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿದ್ದವು .

ಈ ಸಮಗ್ರ ಕೃಷಿ ಮೇಳವು ರೈತರ ಅನುಕೂಲಕ್ಕಾಗಿ ಆಯೋಜಿಸಲಾಗಿದ್ದು ಸಾಂಬಾರು ಪದಾರ್ಥಗಳು, ಕಾಫಿ ಮಂಡಳಿ, ಹಾಪ್‍ಕಾಮ್ಸ್ ಸೇರಿದಂತೆ ವಿವಿಧ ಪ್ರದರ್ಶನ ಮಳಿಗೆಗಳು ಜನರ ಗಮನ ಸೆಳೆದವು. ಮಡಿಕೇರಿ ಆಕಾಶವಾಣಿಯಿಂದ ಕೃಷಿರಾಗ ವಿಭಾಗದ ಡಾ.ವಿಜಯ ಅಂಗಡಿಅವರು ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು. (ಎನ್.ಬಿ)

Leave a Reply

comments

Related Articles

error: