ಮೈಸೂರು

ರಾಜ್ಯಕ್ಕೆ ವಿಶೇಷ ಪ್ಯಾಕೇಜ್’ಗೆ ಆಗ್ರಹಿಸಿ ಸಂಸದರ ಕಚೇರಿ ಮುಂದೆ ಧರಣಿ

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಲು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿ ಸಂಸದ ಪ್ರತಾಪ್ ಸಿಂಹ ಅವರ ಕಾರ್ಯಾಲಯದ ಮುಂದೆ ಇಂದು ಜನಾಂದೋಲನ ಮಹಾಮೈತ್ರಿಯ ಸದಸ್ಯರು ಧರಣಿ ನಡೆಸಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಗುರುವಾರ ಧರಣಿ ನಡೆಸಿದ ಸಂಘಟನೆಯು ಫೆ.1ರಂದು ಮಂಡಿಸಲಿರುವ ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಸಂಸದರು ಒತ್ತಡ ಹೇರಬೇಕು ಎಂದು ಆಗ್ರಹಿಸಿದರು. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯಿಲ್ಲದೆ ರೈತರು ಹಾಗೂ ಗ್ರಾಮೀಣ ಭಾಗದ ಅಸಂಘಟಿತ ಕಾರ್ಮಿಕ ಸಮುದಾಯವೂ ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೇಂದ್ರ ಸರ್ಕಾರವು ರೈತರ ಸಾಲವನ್ನು ಸಂಪೂರ್ಣ ಮನ್ನಾಗೊಳಿಸುವ ವಿಶೇಷ ಪ್ಯಾಕೇಜ್ ಘೋಷಿಸಿ ರೈತರಿಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಸಂಸದರು ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ತರಬೇಕೆಂದು ಕೋರಿದರು.

ಕೇಂದ್ರ ಸರ್ಕಾರವೂ ಈಗಾಗಲೇ ಹಲವಾರು ರಾಜ್ಯಗಳಿಗೆ ಬರ ನಿರ್ವಹಣೆ ಯೋಜನೆಗಳನ್ನು ಜಾರಿಗೊಳಿಸಿದ್ದು ಅದರಂತೆಯೇ ರಾಜ್ಯಕ್ಕೂ ಅನ್ವಯಿಸುವಂತೆ ಒತ್ತಡ ತಂದು ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಿ ರೈತರಲ್ಲಿ ಸ್ಫೂರ್ತಿ ತುಂಬಬೇಕು. ಕಳೆದ ವಿಧಾನಮಂಡಲ ಅಧಿವೇಶನದಲ್ಲೂ ಈ ಬಗ್ಗೆ ಒತ್ತಾಯಿಸಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದ್ದು ಇಂದಿಗೂ ಯಾವುದೇ ಕ್ರಮ ಜರುಗಿಸದೆ ಸರ್ಕಾರ ತಟಸ್ಥವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಯಿತು.

ಧರಣಿಯಲ್ಲಿ ಮಹಾಮೈತ್ರಿಯ ಹೆಚ್.ಜಿ.ಲೋಕೇಶ್ ಅರಸ್, ಪುಟ್ಟಬಸಪ್ಪ, ವಿದ್ಯಾಸಾಗರ, ಸರಗೂರು ನಟರಾಜ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.

 

Leave a Reply

comments

Related Articles

error: