ಕರ್ನಾಟಕಪ್ರಮುಖ ಸುದ್ದಿ

ಕೆಂಪೇಗೌಡ ಏರ್‌ಪೋರ್ಟ್ ಮೆಟ್ರೋ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳು

ಬೆಂಗಳೂರು (ಫೆ.18): ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯಾದ ಕೆ.ಆರ್.ಪುರದಿಂದ ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರ್ಮಾಣವಾಗಲಿರುವ ಮೆಟ್ರೋ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

ಈ ಯೋಜನೆಯಲ್ಲಿ ಸಿಲ್ಕ್ ಬೋರ್ಡ್-ಕೆ.ಆರ್.ಪುರ ಹಾಗೂ ಕೆ.ಆರ್.ಪುರ-ಏರ್‌ಪೋರ್ಟ್ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಇವರೆಡೂ ಮಾರ್ಗಗಳು ಜೊತೆಯಾಗಿ ನಿರ್ಮಾಣವಾಗಲಿದೆ. ಇದರಲ್ಲಿ ಕೆ.ಆರ್. ಪುರ ಹಾಗೂ ನಾಗವಾರ ಇಂಟರ್‌ಚೇಂಜ್ ನಿಲ್ದಾಣಗಳಾಗಿ ನಿರ್ಮಾಣಗೊಳ್ಳಲಿವೆ. ಕೆಆರ್ ಪುರದಿಂದ ಕೆಐಎಎಲ್‌ ನಡುವೆ 17 ನಿಲ್ದಾಣಗಳನ್ನು ನಿರ್ಮಿಸುವಂತೆ ವಿನ್ಯಾಸ ರೂಪಿಸಲಾಗಿದೆ. ಹೆಬ್ಬಾಳ ಹಾದಿಯಾಗಿ ಹೋಗುವ ಏರ್‌ಪೋರ್ಟ್ ಮೆಟ್ರೋ ಮಾರ್ಗವನ್ನು ಹೊರ ವರ್ತುಲ ರಸ್ತೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಹೆಬ್ಬಾಳದಿಂದ ಕೋಗಿಲು ಕ್ರಾಸ್‌ವರೆಗೆ ಪ್ರತಿ 1.4 ಕಿ.ಮೀಗೆ ಒಂದರಂತೆ ಹಾಗೂ ಕೋಗಿಲು ಕ್ರಾಸ್‌ನಿಂದ ಏರ್‌ಪೋರ್ಟ್‌ವರೆಗೆ ಪ್ರತಿ 4 ಕಿ.ಮೀಗೆ ಒಂದರಂತೆ ನಿಲ್ದಾಣ ನಿರ್ಮಿಸುವಂತೆ ವಿನ್ಯಾಸ ಸಿದ್ಧಪಡಿಸಲಾಗುತ್ತಿದೆ. ಈ ಮಾರ್ಗದ ನಡುವೆ ಯಲಹಂಕ ವಾಯುನೆಲೆ ಇದೆ. ಇಲ್ಲಿ ಭೂಮಟ್ಟದಲ್ಲಿ ಮೆಟ್ರೋ ಮಾರ್ಗ ಸಾಗಬೇಕಾಗುತ್ತದೆ. ಹೀಗಾಗಿ ಇಲ್ಲಿ ನಿಲ್ದಾಣ ನಿರ್ಮಿಸುವುದು ಕಷ್ಟಸಾಧ್ಯ. (ಎನ್.ಬಿ)

Leave a Reply

comments

Related Articles

error: