ಮೈಸೂರು

ವಿದ್ಯಾರ್ಥಿಗಳಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ : ಡಾ.ಶ್ರೀಕಂಠಸ್ವಾಮಿ ಕಳವಳ

ಮಹಾತ್ಮಾಗಾಂಧಿ-150 ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳು ’ವರ್ತಮಾನದ ಯುವಜನತೆ’ ವಿಚಾರಸಂಕಿರಣಕ್ಕೆ ಚಾಲನೆ

ಮೈಸೂರು,ಫೆ.19:- ವಿದ್ಯಾರ್ಥಿಗಳಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಶ್ರೀಕಂಠಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಅವರಿಂದು ಕೃಷ್ಣಮೂರ್ತಿಪುರಂನಲ್ಲಿರುವ ಎಂ.ಎಂ.ಕೆ ಮತ್ತು ಎಸ್ ಡಿ ಎಂ ಮಹಿಳಾ ಮಹಾವಿದ್ಯಾಲಯದ ಕಾಲೇಜು ಸಭಾಂಗಣದಲ್ಲಿ ರಾ.ಸೇ.ಯೋ ಘಟಕ ಮತ್ತು ಕನ್ನಡ ವಿಭಾಗದ ವತಿಯಿಂದ ಮಹಾತ್ಮಾಗಾಂಧಿ-150 ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳುವರ್ತಮಾನದ ಯುವಜನತೆಕುರಿತು ವಿಶ್ವವಿದ್ಯಾನಿಲಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಜೀವನದ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದ ಅವರು ಇಂದಿನ ವಿದ್ಯಾರ್ಥಿಗಳು ಓದುವ ಪ್ರವೃತ್ತಿಯಿಂದ ದೂರವಾಗುತ್ತಿದ್ದಾರೆ. ತಂತ್ರಜ್ಞಾನಗಳು ಮುಂದುವರಿದಿವೆ. ತಂತ್ರಜ್ಞಾನಗಳ ಸದ್ಬಳಕೆಯಾಗಬೇಕು. ಇಲ್ಲಿ ಯಾವುದೇ ಕಾರ್ಯಕ್ರಮವಾಗಲಿ ವಿದ್ಯಾರ್ಥಿಗಳು ಮೊಬೈಲ್ ಹಿಡಿದು ಕುಳಿತುಬಿಡುತ್ತಾರೆ. ಮೊಬೈಲ್ ನಲ್ಲಿಯೇ ತಲ್ಲೀನರಾಗುತ್ತಾರೆ. ಯಾವುದಾದರೂ ಎಸೈನ್ ಮೆಂಟ್ ನೀಡಿದರೆ ಇಂಟರ್ ನೆಟ್ ನಿಂದ ಕಾಪಿ ಮಾಡಿ ಚೆಕ್ ಮಾಡದೇ ನೀಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಮುಳುಗದೇ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ  ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ನ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಮಾತನಾಡಿ ಶಿಕ್ಷಣ ಬದುಕು ಮಾತ್ರವಲ್ಲ. ಹೇಗೆ ಬದುಕಬೇಕೆಂಬುದನ್ನು ಕಲಿಸಿಕೊಡುತ್ತದೆ. ಪರಿಪೂರ್ಣ ಜೀವನಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಅವಶ್ಯ. ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ ಎಂದರು. ಈ ರೀತಿಯ ಕಾರ್ಯಕ್ರಮಗಳಿಂದ ಪರಿಪೂರ್ಣ ವ್ಯಕ್ತಿತ್ವ ಪಡೆಯಬಹುದು. ಯಾವುದೇ ದೇಶದ ಇತಿಹಾಸ ತೆರೆದು ನೋಡಿದಾಗ ಅಲ್ಲಿನ ಇತಿಹಾಸ ತುಂಬಾ ಚಿಕ್ಕದು. ನಮ್ಮಷ್ಟು ಸುದೀರ್ಘ ಇತಿಹಾಸವಿಲ್ಲ. ಭಾರತ ಬಹಳ ಹಿಂದಿನಿಂದಲೇ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತ ಬಂದಿದೆ. ಮೊದಲು ಗುರುಕುಲ ಶಿಕ್ಷಣ ಪದ್ಧತಿಯಿತ್ತು. ಗುರು-ಶಿಷ್ಯರಲ್ಲಿ ಅವಿನಾಭಾವ ಸಂಬಂಧವಿರುತ್ತಿತ್ತು. ವಿಜ್ಞಾನ, ತಂತ್ರಜ್ಞಾನದಲ್ಲಿಯೂ ನಾವು ಮುಂದುವರಿದಿದ್ದೇವೆ ಎಂದರು. ನಮಗೀಗ ತಮ್ಮ ಮೇಲೆ ತಮಗೆ ವಿಶ್ವಾಸವಿರುವ ಯುವಪೀಳಿಗೆ ಬೇಕು. ದೇಶಕಟ್ಟಲು ಬಹಳ ತಾಳ್ಮೆ ಬೇಕು. ರಾಷ್ಟ್ರ ನಿರ್ಮಾಣಕ್ಕೆ ತೊಡಗುವ ವ್ಯಕ್ತಿ ನಮ್ಮ ಪಕ್ಕದ ಮನೆಯಲ್ಲಿದ್ದರೆ ಸಾಕು ಎಂಬ ಭಾವನೆ ಸಲ್ಲದು. ನಮ್ಮ ಮನೆಯ ಮಕ್ಕಳು ಕೂಡ ರಾಷ್ಟ್ರನಿರ್ಮಾಣಕ್ಕೆ ಮುಂದಾಗಬೇಕೆಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ನಮ್ಮ ಸುತ್ತಮುತ್ತ ಇರುವ, ದೇಶದ ಸಮಸ್ಯೆಗಳನ್ನು  ತಿಳಿದುಕೊಳ್ಳಬೇಕು. ಅದರ ಪರಿಣಾಮಗಳ ಕುರಿತು ಚಿಂತಿಸಬೇಕು. ಪರಿಹಾರವನ್ನು ಬೇರೆಯವರು ಮಾಡುತ್ತಾರೆ ಎನ್ನುವುದಕ್ಕಿಂತ ನಾವೇ ಮಾಡಿಕೊಳ್ಳಬೇಕು. ಆಲೋಚನೆ ಬೆಳೆಸಿ ಜೀವನ ರೂಪಿಸಿಕೊಳ್ಳಬೇಕು. ಪದವಿಗಳೆಲ್ಲ ಕೇವಲ ಆಲೋಚನೆ ತುಂಬುವ ಪ್ರಕ್ರಿಯೆಯಷ್ಟೇ. ಸ್ವಂತವಾಗಿ ಚಿಂತಿಸುವ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಹೇಳುವಂತೆ ಅನುಕಂಪ, ವಿಶ್ವಾಸ, ಸದಾಕಾಲ ಸಕಾರಾತ್ಮಕ ಚಿಂತನೆ, ಹಾಸ್ಯಪ್ರಜ್ಞೆ, ನಿರ್ಭಯತೆಯನ್ನು ಬೆಳೆಸಿಕೊಳ್ಳಬೇಕು. ವಿವೇಕಾಂದರ ಜೀವನದ ಸಂದೇಶದಂತೆ ಜೀವಿಸುವ ಪ್ರಯತ್ನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಾಯಿನಾಥ ಮಲ್ಲಿಗೆ ಮಾಡು ಅಧ್ಯಕ್ಷತೆವಹಿಸಿದ್ದರು.

ಈ ಸಂದರ್ಭ  ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ವಿನೋದ, ರಾ.ಸೇ.ಯೋ.ಕಾರ್ಯಕ್ರಮಾಧಿಕಾರಿ ಬಿ.ಎನ್.ಮಾರುತಿ ಪ್ರಸನ್ನ ಉಪಸ್ಥಿತರಿದ್ದರು.(ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: