ಮೈಸೂರು

ಜಾನಪದ ವಸ್ತು ಸಂಗ್ರಹಾಲಯ ಬಹುಮುಖವಾದ ಸಂಸ್ಕೃತಿಯ ಆಗರ : ಡಾ.ನಂಜಯ್ಯ ಹೊಂಗನೂರು

ಮೈಸೂರು,ಫೆ.20:- ಜಾನಪದ ವಸ್ತು ಸಂಗ್ರಹಾಲಯ ಬಹುಮುಖವಾದ ಸಂಸ್ಕೃತಿಯ ಆಗರ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಪ್ರಾಧ್ಯಾಪಕ ಡಾ.ನಂಜಯ್ಯ ಹೊಂಗನೂರು ತಿಳಿಸಿದರು.

ಅವರಿಂದು ಮೈಸೂರು ವಿಶ್ವವಿದ್ಯಾನಿಲಯ ಡಾ.ಪಿ.ಆರ್.ತಿಪ್ಪೇಸ್ವಾಮಿ ಪೀಠ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ವತಿಯಿಂದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಮಿತಿ ಕೊಠಡಿಯಲ್ಲಿ ಹಮ್ಮಿಕೊಳ್ಳಲಾದ ಡಾ.ಪಿ.ಆರ್.ತಿಪ್ಪೇಸ್ವಾಮಿ ಪೀಠ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾನಪದ ವಸ್ತು ಸಂಗ್ರಹಾಲಯ ಕುರಿತು ಉಪನ್ಯಾಸ ನೀಡಿದರು.

70ರ ದಶಕ ಸಾಂಸ್ಕೃತಿಕ ಸಂವೇದನೆಗಳ ದಶಕ. ಜಾನಪದ ಸಂಗ್ರಹಾಲಯ ಮಾಡಬೇಕೆಂಬುದು ತಿಪ್ಪೇಸ್ವಾಮಿಯವರ ಕನಸಾಗಿತ್ತು. ಅದನ್ನು ನನಸು ಮಾಡಿದ್ದಲ್ಲದೇ, ಮನಮುಟ್ಟುವ ಹಾಗೆ ಮಾಡಿದರು. ಅದರದ್ದೇ ಆದ ಸಾಂಸ್ಕೃತಿಕ ವಿಚಾರ ಬರೆದು ವಿವರ ನೀಡಿದರು. ಮುಂದಿನ ಪೀಳಿಗೆಗೆ ಅಧ್ಯಯನ ಸಂಶೋಧನಾ ವಿಭಾಗವಾಗಬೇಕೆಂದು ಆಲೋಚಿಸಿ ಮಾಡಿದರು ಎಂದರು. ವೈಜ್ಞಾನಿಕವಾಗಿ ನಿರ್ಮಿಸಿ ಕನ್ನಡ-ಇಂಗ್ಲಿಷ್ ವಿವರಣೆ ನೀಡಿದರು. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳುರು, ನಾಗಮಂಗಲ ಸೇರಿದಂತೆ ಹತ್ತು ಹಲವು ಪ್ರದೇಶಗಳನ್ನು ಸುತ್ತಿ ಕ್ಷೇತ್ರ ಕಾರ್ಯ ಮಾಡಿದರು. ಅಲ್ಲಿ ಹೋಗಿ ನೋಡಿದರೆ ಯಾವ ಯಾವ ಗ್ರಾಮದವರು ಏನೇನು ನೀಡಿದ್ದಾರೆ ಎನ್ನುವುದು ತಿಳಿಯಲಿದೆ. ಮೈಸೂರಿನಲ್ಲಿ ಪರಂಪರೆ ಬಿಂಬಿಸುವ ಅಮೂಲ್ಯ ಸಂಗ್ರಹಾಲಯವಿದೆ. ಇದು ಬಹುಮುಖವಾದ ಸಂಸ್ಕೃತಿಯ ಆಗರ. ಯಾವ ಯಾವ ತರಹದ ಸಲಕರಣೆಗಳಿದ್ದವು ಎಂಬುದನ್ನು ಇಲ್ಲಿ ನೋಡಿ ತಿಳಿದುಕೊಳ್ಳಬಹುದು. ವಸ್ತುಸಂಗ್ರಹಾಲಯದ ಕಲ್ಪನೆ ಸಂಕೀರ್ಣವಾಗಿದೆ. ಜನಪದ ವಸ್ತು ಸಂಗ್ರಹಾಲಯ ಎಂದಿಗೂ ಜೀವಂತ. ಸಾಂಸ್ಕೃತಿಕ  ರೂಪಕೊಡುವುದು ಬಹಳ ದೊಡ್ಡ ಕೆಲಸ. ಜಾನಪದ ವಸ್ತು ಸಂಗ್ರಹಾಲಯ ಎಂದರೆ ತಿಪ್ಪೇಸ್ವಾಮಿಯವರನ್ನು ನೆನಪಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಮೈಸೂರು ಕೃಷ್ಣಮೂರ್ತಿ ಮತ್ತು ವೃಂದ, ಹೊನ್ನಾರು ಜನಪದ ಗಾಯಕರು ಜನಪದ ಗೀತ ಗಾಯನವನ್ನು ಪ್ರಸ್ತುತಪಡಿಸಿದರು.

ಈ ಸಂದರ್ಭ ಕುವೆಂಪು ಕನ್ನಡ ಅದ್ಯಯನ ಸಂಸ್ಥೆಯ ಪ್ರೊ.ರವೀಂದ್ರ, ಡಾ.ಪಿ.ಆರ್.ತಿಪ್ಪೇಸ್ವಾಮಿ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ.ಪಿ.ಕೆ.ರಾಜಶೇಖರ್,  ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: