ಮೈಸೂರು

ಅಹಿಂಸೆಯ ಮೂಲಕವೇ ಎಲ್ಲರನ್ನೂ ಒಲಿಸಿಕೊಂಡವರು ಗಾಂಧೀಜಿ : ಪ್ರೊ.ಗುರುರಾಜ್ ಕರ್ಜಗಿ ಬಣ್ಣನೆ

ಮೈಸೂರು,ಫೆ.20:- ಅಹಿಂಸೆಯ ಮೂಲಕವೇ ಎಲ್ಲರನ್ನೂ ಒಲಿಸಿಕೊಂಡವರು ಗಾಂಧೀಜಿ ಎಂದು ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ನ ಅಧ್ಯಕ್ಷ ಪ್ರೊ.ಗುರುರಾಜ್ ಕರ್ಜಗಿ ಬಣ್ಣಿಸಿದರು.

ಅವರಿಂದು ಮೈಸೂರು ವಿಶ್ವವಿದ್ಯಾನಿಲಯ ತತ್ವಶಾಸ್ತ್ರ ಅಧ್ಯಯನ ವಿಭಾಗ ಮಾನಸಗಂಗೋತ್ರಿ ವತಿಯಿಂದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ಗಾಂಧೀ ಚಿಂತನೆಯಲ್ಲಿ ಸಾಮಾಜಿಕ ಮತ್ತು ನೈತಿಕ ಆಯಾಮಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿಯವರ ಬಗ್ಗೆ ಏನಕ್ಕೆ ಓದಬೇಕು, ಏನಕ್ಕೆ ಅಧ್ಯಯನ ಮಾಡಬೇಕು ಎಂದು ಕೆಲವರು ಯೋಚಿಸುತ್ತಾರೆ. ಆದರೆ ಗಾಂಧೀಜಿಯವರು ಸತ್ಯ, ಅಹಿಂಸೆಗೆ ಹೆಸರಾದವರು. ಅವರನ್ನು ಕೇವಲ ಭಾರತವಲ್ಲದೇ ಇಡೀ ವಿಶ್ವವೇ ಗುರುತಿಸುವಂತೆ ಮಾಡದವರು ಎಂದರು. ಅಹಿಂಸೆಯ ಮೂಲಕವೇ ಎಲ್ಲರನ್ನೂ ತನ್ನತ್ತ ಸೆಳೆದರು ಎಂದು ತಿಳಿಸಿದರು.

ಮೈಸೂರು ವಿವಿಯ ಕುಲಸಚಿವ ಪ್ರೊ.ಆರ್.ರಾಜಣ್ಣ ಮಾತನಾಡಿ ಗಾಂಧೀಜಿ ಸಾಮಾಜಿಕ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರು, ವಿವಿಧ ಆಯಾಮಗಳಲ್ಲಿ ತನ್ನ ಛಾಪನ್ನು ಮೂಡಿಸಿದವರು. ಬ್ರಿಟಿಷರಲ್ಲಿ ತಮ್ಮ ಬೇಡಿಕೆಯನ್ನಿಡುವ ಮೂಲಕ ಶಾಂತ ರೀತಿಯಲ್ಲಿಯೇ ಸ್ವಾತಂತ್ರ್ಯ ಪಡೆದರು. ಗಾಂಧೀಜಿಯವರ ಚಿಂತನೆ, ಸಾಮಾಜಿಕ ಕಳಕಳಿ, ಸೇವಾಮನೋಭಾವ ಅದ್ಭುತವಾಗಿತ್ತು. ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದ ತತ್ವಜ್ಞಾನಿ. ಶಾಂತಿಯ ಮೂಲಕವೇ ಕ್ರಾಂತಿ ನಡೆಸಿದರು ಎಂದರು. ವಿವಾದಕ್ಕೆ ಒಳಗಾಗದೇ ತತ್ವ, ಸಿದ್ಧಾಂತ ಪಾಲನೆಯನ್ನು ಮಾಡಿದ್ದರು. ಆದರ್ಶಗಳನ್ನು ಅಳವಡಿಸಿಕೊಂಡಿದ್ದರು. ಗಾಂಧೀಜಿಯವರು ಹಲವರಿಗೆ ಸ್ಫೂರ್ತಿ. ಗಾಂಧೀಜಿಯವರ ಚಿಂತನೆಗಳನ್ನು, ಸಾಮಾಜಿಕ ತತ್ವಗಳನ್ನು, ಅವರು ಮಾಡಿದ ಕೆಲಸಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಂದರ್ಶಕ ಪ್ರಾಧ್ಯಾಪಕ ಪ್ರೊ.ವಿ.ಎನ್.ಶೇಷಗಿರಿರಾವ್, ಸಂಯೋಜಕ ಡಾ.ಎಂ.ಡ್ಯಾನಿಯಲ್, ಅಧ್ಯಕ್ಷ ಡಾ.ಎಸ್.ವೆಂಕಟೇಶ್ , ಕಲಾ ನಿಕಾಯ್ ಡೀನ್ ಪ್ರೊ.ಮಹಾದೇವ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: