ಮೈಸೂರು

ಮಾನವ ಹಕ್ಕುಗಳ ದಮನದಿಂದ ಸೃಜನಶೀಲತೆ, ಆವಿಷ್ಕಾರ ಸಾಮರ್ಥ್ಯಕ್ಕೆ ಹಾನಿ: ಪ್ರೊ.ಕೆ.ಎಸ್.ಸುರೇಶ್

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಮೈಸೂರು ವಿಶ್ವವಿದ್ಯಾನಿಲಯ ಮಹಾರಾಜ ಕಾಲೇಜಿನ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ವತಿಯಿಂದ ಗುರುವಾರ ಕಾಲೇಜಿನ ಜೂನಿಯರ್ ಬಿ.ಎ. ಹಾಲ್’ನಲ್ಲಿ ‘ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಂವೇದನಶೀಲತೆಯ ಅರಿವು’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆ.ಎಸ್.ಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್.ಸುರೇಶ್ ಅವರು, “ಮಾನವ ಹಕ್ಕುಗಳಿಲ್ಲದೇ ಸಮಾಜದ ಉಳಿವು ಅಸಾಧ್ಯ. ಮಾನವ ಹಕ್ಕುಗಳ ದಮನ ಹೆಚ್ಚಾಗುತ್ತಿರುವುದರಿಂದ ಸೃಜನಶೀಲ ಕಲ್ಪನೆಗಳು, ಆವಿಷ್ಕಾರಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಅಭಿವೃದ್ಧಿಯ ಹತ್ಯೆಯಾಗುತ್ತಿವೆ. ಆದರೆ ಇಂದು ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿರುವುದು ಕಳವಳಕಾರಿ. ಮಾನವ ಹಕ್ಕುಗಳು ಸಮಾಜದ ಬಹುಮುಖ್ಯ ಭಾಗವಾಗಿವೆ. ಇವುಗಳಿಲ್ಲದೇ ಜಗತ್ತಿನ ಅಭಿವೃದ್ಧಿ ಎಂದಿಗೂ ಸಾಧ‍್ಯವಿಲ್ಲ ಎಂದು ಹೇಳಿದರು.

ಸಾವಿರಾರು ಮಾನವ ಹಕ್ಕುಗಳನ್ನು ಪಟ್ಟಿ ಮಾಡಲಾಗಿದೆ. ಆದರೆ ಕೇವಲ 30 ಹಕ್ಕುಗಳು ಮಾತ್ರ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಸೇರ್ಪಡೆಯಾಗಿವೆ. ನಮ್ಮಲ್ಲಿ ಕಾನೂನು ಬಹಳ ಕಠಿಣವಾಗಿವೆ. ಸತ್ತ ವ್ಯಕ್ತಿಯ ಮಾನಹಾನಿ ಮಾಡುವಂತಿಲ್ಲ. ಅದು ಕೂಡ ಕಾನೂನಿಗೆ ವಿರುದ್ಧವಾದುದು ಎಂದು ಹೇಳಿದರು.

ಇಂದು ಮಾನವ ಹಕ್ಕುಗಳ ವ್ಯಾಪ್ತಿ ಬಹಳಷ್ಟು ಹೆಚ್ಚಾಗಿದೆ. ಮಗು ಗರ್ಭದಲ್ಲಿರುವಾಗಲೇ ಅಲ್ಲ. ಸತ್ತು ಮಣ್ಣಾದರೂ ಸಹ ಮಗುವನ್ನು ಅವಮಾನಿಸುವಂತಿಲ್ಲ. ಒಂದು ವೇಳೆ ಅಪಮಾನಿಸಿದರೆ, ಅದು ಕಾನೂನಿಗೆ ವಿರುದ್ಧವಾದುದು. ಕಾನೂನಲ್ಲಿ ಸತ್ತ ವ್ಯಕ್ತಿಯನ್ನು ಸಹ ಶಾಂತಿಯುತವಾಗಿ ಹೂಳುವಂತೆ ಹೇಳುತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಲೇ ಇದೆ. ಇದು ಒಂದಲ್ಲ ಒಂದು ರೀತಿಯಲ್ಲಿ ಗೋಚರಿಸುತ್ತಲೇ ಬಂದಿದೆ. ಇಂದಿನ ಮಾಹಿತಿ ಯುಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಅಂತ್ಯವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಬಿ.ಎನ್.ಯಶೋಧ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರಭಾರ ಪ್ರಾಂಶುಪಾಲ ಲಿಂಬನಾಯ್ಕ, ಪ್ರಾಧ‍್ಯಾಪಕ ಡಾ.ಹನುಮಂತರಾಜು, ಡಾ.ವಿಜಯಲಕ್ಷ್ಮೀ ಮನಾಪುರ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: