ಮೈಸೂರು

ವಿದ್ಯಾರ್ಥಿಗಳು ಬಲಿಷ್ಠ ಭಾರತ ಕಟ್ಟಲು ಮುಂದಾಗಿ : ಸಾಹಿತಿ ಬನ್ನೂರು ಕೆ.ರಾಜು

ಭಾರತವನ್ನು ಜಾಗೃತಗೊಳಿಸಿ, ಅಲ್ಪಾಯುಷ್ಯದಲ್ಲೇ ಅಗಾಧ ಸಾಧನೆಗೈದು ದೇಶಕ್ಕೆ ಮುಂಬೆಳಕು ನೀಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ಮೈಸೂರು ಕನ್ನಡ ವೇದಿಕೆ ಹಾಗೂ ಶ್ರೀಕೃಷ್ಣ ಲಲಿತಾ ಕಲಾಮಂದಿರದ ಸಂಯುಕ್ತಾಶ್ರಯದಲ್ಲಿ ಶ್ರೀಕೃಷ್ಣ ಲಲಿತಾ ಕಲಾಮಂದಿರದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕವಾಗಿ, ವಿವೇಕಪ್ರಭೆಯಾಗಿ ಭಾರತದ ಹಿರಿಮೆಯನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದ ಮಹಾನ್ ವ್ಯಕ್ತಿ ಎಂದು ಹೇಳಿದರು.
ಸಮಸಮಾಜ ಹಾಗೂ ಸಾಮರಸ್ಯ ಸಮಾಜವನ್ನು ಕಟ್ಟುವ ಕನಸನ್ನು ವಿವೇಕಾನಂದರು ಕಂಡಿದ್ದರು. ಇದನ್ನು ನನಸಾಗಿಸುವ ನಿಟ್ಟಿನಲ್ಲಿ ಯುವಜನತೆಗೆ ಉದಾತ್ತ ಚಿಂತನೆಗಳನ್ನು ಬೋಧಿಸಿದ್ದರು. ಪ್ರಸ್ತುತ ದಿನಗಳಲ್ಲಿ ಇದನ್ನು ಅರ್ಥಮಾಡಿಕೊಂಡು ಯುವಜನತೆ ಹಾಗೂ ವಿದ್ಯಾರ್ಥಿಗಳು ವಿವೇಕಾನಂದರ ಕನಸನ್ನು ನನಸು ಮಾಡಬೇಕು. ಆದರ್ಶ ಹಾಗೂ ಬಲಿಷ್ಠ ಭಾರತವನ್ನು ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಯುವಶಕ್ತಿಯ ಬಗ್ಗೆ ಅಪಾರ ನಂಬಿಕೆಯಿಟ್ಟಿದ್ದ ವಿವೇಕಾನಂದರು ಯಾವುದೇ ಜಾತಿ, ಧರ್ಮಕ್ಕೆ ಅಂಟಿಕೊಂಡವರಲ್ಲ. ಧರ್ಮವನ್ನು ನಿರಾಕರಿಸಿದವರೂ ಅಲ್ಲ. ಧರ್ಮದೊಳಗೆ ಇದ್ದುಕೊಂಡೆ ಅದರ ಆಗುಹೋಗುಗಳನ್ನು, ಸತ್ಯಾಸತ್ಯತೆಗಳನ್ನು ವಿಶ್ಲೇಷಿಸಿ ಜನರಿಗೆ ತಿಳಿಸುತ್ತಿದ್ದರು. ನಮ್ಮ ದೇಶ ಯಾವುದೇ ಕಾರಣಕ್ಕೂ ಜಾತಿ ಧರ್ಮದ ಆಧಾರದ ಮೇಲೆ ನಿರ್ಮಾಣವಾಗಬಾರದು. ಧರ್ಮರಹಿತ, ಜಾತಿರಹಿತ ಸಮಾಜ ನಿರ್ಮಾಣವಾಗಿ ಎಲ್ಲಾ ಸಮುದಾಯವರು ಬೆರೆತು ಬಾಳುವಂತಾಗಬೇಕು ಎಂದು ಹಂಬಲಿಸಿದ್ದ ಅವರು, ಭಾರತಕ್ಕೆ ವೇದಾಂತದ ಮೆದುಳು, ಇಸ್ಲಾಂ ಧರ್ಮದ ದೇಹದ ಅವಶ್ಯಕತೆ ಇದೆ ಎಂದು ಸಾರಿ ಹೇಳಿದ್ದರು. ಈ ಎರಡೂ ಧರ್ಮಗಳ ಸಂಗಮವಾದಾಗ ಮಾತ್ರ ಸಾಮರಸ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಇದೇ ವೇಳೆ ವಿವೇಕಾನಂದರ ಅಪರೂಪದ 40ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜೀವ್ ರಾಮನಾಥ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ಮನುರಾಜ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಭಾಮಣಿ, ಟ್ರಸ್ಟಿ ಭಾಮಾ ರಘುರಾಂ, ಮುಖ್ಯೋಪಾಧ್ಯಾಯರಾದ ಪರಮೇಶ್, ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Leave a Reply

comments

Related Articles

error: