ಮೈಸೂರು

ಬೇಸಿಗೆ ಹಿನ್ನೆಲೆ; ಸೊಳ್ಳೆಗಳ ಉತ್ಪತ್ತಿ : ಸರ್ಕಾರ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಒತ್ತಾಯ

ಮೈಸೂರು,ಫೆ.21:- ಬೇಸಿಗೆ ಕಾಲ ಶುರುವಾಗಿರುವುದರಿಂದ ನೀರಿನ ಸೌಲಭ್ಯ ಕಡಿಮೆಯಾಗಿ ಜನರಲ್ಲಿ ನೀರು ಶೇಖರಣೆ ಮಾಡಿಟ್ಟುಕೊಳ್ಳುವ ಹವ್ಯಾಸ ಹೆಚ್ಚಾಗುತ್ತದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಕಂಡುಬರುತ್ತದೆ. ಡೆಂಗ್ಯೂ .ಚಿಕನ್ ಗುನ್ಯಾ ರೋಗಗಳು ವ್ಯಾಪಕವಾಗಿ ಹರಡುವ ಸಂಭವವಿರುವುದರಿಂದ ಸಾರ್ವಜನಿಕರು ಮುಂಜಾಗ್ರತಾ  ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಘನತ್ಯಾಜ್ಯ ವಸ್ತುಗಳು ಅಂದರೆ ತೆಂಗಿನ ಚಿಪ್ಪು, ಹಳೇಟೈರು, ಒಡೆದ ಬಾಟಲು, ಎಳನೀರು ಬುರುಡೆ, ಅನುಪಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸಾರ್ವಜನಿಕರು ನಿಗಾವಹಿಸಬೇಕು. ಮನೆಯೊಳಗೆ ಸೊಳ್ಳೆಗಳು ಬರದಂತೆ ಕಿಟಕಿಗಳಿಗೆ ಜಾಲರಿ ಅಳವಡಿಸಬೇಕು. ರಾತ್ರಿ ವೇಳೆ ಅಲ್ಲದೇ ಹಗಲು ವೇಳೆಯೂ ವಿಶ್ರಾಂತಿ ತೆಗೆದುಕೊಳ್ಳುವವರು ಸೊಳ್ಳೆಗಳು ಕಚ್ಚದಂತೆ ಸೊಳ್ಳೆ ಪರದೆ ಉಪಯೋಗಿಸಬೇಕು.

ವಾರದಲ್ಲಿ ಎರಡು ಬಾರಿ ನೀರು ಸಂಗ್ರಹ ತೊಟ್ಟಿ ಬ್ಯಾರಲಗಳಲ್ಲಿನ ನೀರು ಖಾಲಿ ಮಾಡಿ. ಉಜ್ಜಿ ತೊಳೆದು ಒಣಗಿಸಿ. ಪುನಃ ನೀರು ಸಂಗ್ರಹಿಸಿ ಸೊಳ್ಳೆಗಳು ಅದರಲ್ಲಿ ಪ್ರವೇಶ ಮಾಡದಂತೆ ಮುಚ್ಚಿಟ್ಟುಕೊಳ್ಳಬೇಕು. ಹೂವಿನ ಕುಂಡಗಳ ಕೆಳಗಿನ ಪ್ಲೇಟಗಳಲ್ಲಿ ಫ್ರಿಡ್ಜ್, ಏರ್ ಕೂಲರ್ ಗಳಲ್ಲಿ  ನೀರು ನಿಲ್ಲದಂತೆ ಆಗಾಗ್ಗೆ  ಖಾಲಿ ಮಾಡಲು ಕ್ರಮವಹಿಸಬೇಕು.

ಮನೆಯ ನಲ್ಲಿ  ಗುಂಡಿಗಳಲ್ಲಿ ಲಾರ್ವಾ (ಸೊಳ್ಳೆಯ ಮರಿಗಳು) ಉತ್ಪತ್ತಿಯಾಗದಂತೆ ಕ್ರಮವಹಿಸಬೇಕು. ಅದಕ್ಕಾಗಿ ಆರೋಗ್ಯ ಇಲಾಖೆ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಜ್ವರ ಸಮೀಕ್ಷೆ ,ಲಾರ್ವಾ ಸಮೀಕ್ಷೆ ಹಾಗೂ ಲಾರ್ವಾ ನಿರ್ಮೂಲನೆಗೆ ಕ್ರಮ ವಹಿಸಬೇಕು. ಹಾಗೆಯೇ ಸಾರ್ವಜನಿಕರಿಗೆ ಭಿತ್ತಿ ಪತ್ರಗಳನ್ನು ವಿತರಿಸಿ ಆರೋಗ್ಯ ಕುರಿತು ಜಾಗೃತಿ ಮೂಡಿಸಬೇಕು. ನೀರು ನಿಂತ ಸ್ಥಳಗಳಲ್ಲಿ ಲಾರ್ವಾ ಉತ್ಪತ್ತಿಯಾಗದಂತೆ  ಕ್ರಮ ವಹಿಸಬೇಕು  ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: