ಪ್ರಮುಖ ಸುದ್ದಿಮೈಸೂರು

ರಸ್ತೆ ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿ : ರವಿ ಡಿ. ಚನ್ನಣ್ಣನವರ್

ರಸ್ತೆ ಅಪಘಾತವನ್ನು ತಪ್ಪಿಸಿ ಕುಟುಂಬದ ನೆಮ್ಮದಿಯನ್ನು ಉಳಿಸಿ ಎಂದು ಮೈಸೂರು ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ ಚೆನ್ನಣ್ಣನವರ್ ಮನವಿ ಮಾಡಿದರು.

ನಂಜನಗೂಡು  ನಗರದ ಪ್ರಮುಖ ಸಂಚಾರಿ ಕೇಂದ್ರಗಳಾದ ಅಪೊಲೋ ವೃತ್ತ, ಅಂಗಡಿಬೀದಿಯ ನೆಹರು ವೃತ್ತ, ಹಾಗೂ ವಿಶ್ವೇಶ್ವರಯ್ಯ ವೃತ್ತದ 3 ಸಂಚಾರಿ ಪೊಲೀಸ್ ಚೌಕಿಗಳನ್ನು ರಿಬ್ಬನ್  ಕತ್ತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ  ಏರ್ಪಡಿಸಿದ್ದ ಕಾರ್ಯಕ್ರಮವನ್ನು  ದೀಪ ಬೆಳಗುವ ಮೂಲಕ  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕತ್ತಿ ಗುರಾಣಿಗಳಿಂದ ಹಿಡಿದು ಆಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡ ಯುದ್ಧಗಳಲ್ಲಿ ಇಲ್ಲಿಯವರೆಗೆ ಮಡಿದವರ ಸಂಖ್ಯೆಗಿಂತ ರಸ್ತೆ ಅಪಘಾತದಲ್ಲಿ ಸತ್ತವರ ಸಂಖ್ಯೆಯೇ ಅಧಿಕವಾಗಿದೆ. ಪ್ರತಿ ವರ್ಷ ನಮ್ಮರಾಜ್ಯದಲ್ಲಿ 337 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಇಡೀ ದೇಶದಲ್ಲಿ 12.67 ಲಕ್ಷ ಮಂದಿ ಅಪಘಾತದಲ್ಲಿ ಸಾವಿಗೀಡಗುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ವರ್ಷಕ್ಕೆ 400ರಷ್ಟು ಜನ ರಸ್ತೆ ಅಪಘಾತದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊಲೆಗಳು ವರ್ಷಕ್ಕೆ 60-70 ನಡೆಯುತ್ತವೆ. ಅದೂ ಸಹ ನಡೆಯುವಂತಾಗಬಾರದು. ರಸ್ತೆ ಅಪಘಾತದಲ್ಲಿ 400 ಜನರು ಸಾವನ್ನಪ್ಪುತ್ತಾರೆ. ಆದ್ದರಿಂದ ಎಲ್ಲರು ರಸ್ತೆ ಸುರಕ್ಷಿತೆಯನ್ನು ಪಾಲಿಸಬೇಕು. ಕುಟುಂಬದ ಆಸರೆಯ ವ್ಯಕ್ತಿ  ಮೃತನಾದರೆ ಆ ಕುಟುಂಬವೇ ಒಂದು ತಲೆಮಾರು ಹಿಂದಕ್ಕೆ ಸರಿಯುತ್ತದೆ. ರಸ್ತೆ ಅಪಘಾತದಲ್ಲಿ ಮಡಿದವರಲ್ಲಿ ಶೇಖಡ 25ರಷ್ಟು ದ್ವಿಚಕ್ರ ವಾಹನ ಸವಾರರೇ ಆಗಿದ್ದಾರೆ.  ಪ್ರಾಣ ಕಳೆದುಕೊಂಡವರೆಲ್ಲ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವದಿಂದಲೇ ಅಸುನೀಗಿದ್ದಾರೆ.  ಆದ್ದರಿಂದ ಹೆಲ್ಮೆಟ್ ಧರಿಸಿ ವಾಹನ ಸವಾರಿ ಮಾಡಿ, ದೇಶದಲ್ಲಿ ರಸ್ತೆ ಅಪಘಾತ ದಿಂದ ಆಗುವ ನಷ್ಟ ನಮ್ಮ ರಾಜ್ಯದ ಒಂದು ವರ್ಷದ ಬಜೆಟ್ ಗೆ  ( ಒಂದು ಕೋಟಿ ಮೂವತ್ತು ಲಕ್ಷ) ಸಮ. ಆದ್ದರಿಂದ ಎಲ್ಲರು ರಸ್ತೆ ಅಪಘಾತವನ್ನು ತಗ್ಗಿಸಲು ಪ್ರಯತ್ನಿಸಿ ಎಂದರು.
ರಸ್ತೆ ನಿರ್ಮಾಣದಲ್ಲಿ ದೋಷವಿದ್ದು ಅದರಿಂದ ಅಪಘಾತ ಸಂಭವಿಸಿದರೆ ಅವರ ಮೇಲೂ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ತಿಳಿಸಿದರು. ಎಲ್ಲ ಆಟೋಚಾಲಕರು ರಸ್ತೆ ಸುರಕ್ಷತೆಯ ಬಗ್ಗೆ ಗಮನ ಹರಿಸಿ. ರಸ್ತೆ ಸುರಕ್ಷತೆ ಜೊತೆಗೆ ನಗರದ ಸುರಕ್ಷತೆಯು ನಿಮ್ಮ ಜವಾಬ್ದಾರಿ ಎಂದರು.ಅಪಘಾತವಾದ ಸಂದರ್ಭದಲ್ಲಿ  ಗಾಯಾಳುವನ್ನು ಮೊದಲು ಆಸ್ಪತ್ರೆಗೆ ದಾಖಲಿಸಿ ಯಾವುದೇ ಕೇಸು ಕೋರ್ಟ್ ಕಟಕಟೆಯ ಭಯ ಬೇಡ. ಯಾವುದೇ ತೊಂದರೆಯೂ ಬರುವುದಿಲ್ಲ ಎಂದು ಧೈರ್ಯ ತುಂಬಿದರು. ಹೆಲ್ಮೆಟ್ ಧರಿಸದಿದ್ದರೆ ಕುಟುಂಬಕ್ಕೆ ಆಗುವ ನಷ್ಟವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಅದನ್ನು ಪೊಲೀಸ್ ಕಾಟವೆಂದು ಭಾವಿಸಬೇಡಿ. ಪ್ರತಿಯೊಬ್ಬ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿ.  ಹೆಲ್ಮೆಟ್ ಧಾರಣೆ ಕುರಿತಂತೆ ಫೆಬ್ರವರಿ ತಿಂಗಳಿಂದ ಕಟ್ಟು ನಿಟ್ಟಿನ ಕ್ರಮ‌ ಜರುಗಿಸಲಾಗುವುದು. ಹೆಲ್ಮೆಟ್ ಧರಿಸದಿದ್ದರೆ ವಾಹನವನ್ನು  ಜಫ್ತಿ ಮಾಡಲಾಗುವುದು. ನಂತರ ಹೆಲ್ಮೆಟ್ ತಂದು ತೋರಿಸಿ ವಾಹನ ಬಿಡಿಸಿ ಕೊಳ್ಳುವ ಪದ್ದತಿ ಜಾರಿಗೆ ತರುವುದಾಗಿ ತಿಳಿಸಿದರು.

ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಂಜನಗೂಡು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇನ್ನಷ್ಟು ಉತ್ಸಾಹದಿಂದ ಕಾರ್ಯ ನಿರ್ವಹಿಸುವಂತೆ ಆಶಿಸಿದರಲ್ಲದೇ,  ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡಿದ ಸಿಬ್ಬಂದಿಗೆ 5000ರೂ. ಬಹುಮಾನ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸರಿಗೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. 188ಮಂದಿ ಆಟೋಚಾಲಕರಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್, ವೃತ್ತನಿರೀಕ್ಷಕ ಶಿವಮೂರ್ತಿ,  ಮಹಿಳಾ ಪೊಲೀಸ್ ಅಧಿಕಾರಿ ಸುಜಿತ ಮಹಮ್ಮದ್,  ಡಾ. ಅನಸೂಯ, ಖಾದರ್ ಸಾಬ್,ಸಂಚಾರಿ ಪಿಎಸ್.ಐ.ಆನಂದ್, ಪಿ.ಎಸ್.ಐ.ಚೇತನ್,ಸಂದೀಪ್,ನಾಗರಾಜು, ಕೆಂಪೇಗೌಡ, ಎ.ಎಸ್.ಐ ಗಳು ಆಟೋಚಾಲಕರು, ಟ್ಯಾಕ್ಸಿ ಚಾಲಕರು, ಮಾಲೀಕರು ಉಪಸ್ಥಿತರಿದ್ದರು.

Leave a Reply

comments

Related Articles

error: