ಮೈಸೂರು

ನಿಗೂಢ ಸಾವು ಪ್ರಕರಣ : ದೂರು ದಾಖಲು

ಮೈಸೂರು ಜಿಲ್ಲೆ ಟಿ.ನರಸೀಪು ತಾಲೂಕಿನ ಬನ್ನೂರು ಗ್ರಾಮದ ಮಂಗಳಮ್ಮ ಎಂಬುವರು ತನ್ನ ಮಗನ ಕೊಲೆಯನ್ನು ಆತನ ಪ್ರೇಯಸಿ ಮನೆಯವರು ಮಾಡಿಸಿದ್ದಾರೆ ಎಂದು ಆರೋಪಿಸಿ ಬನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳಮ್ಮ ಎಂಬವರ  ಒಬ್ಬನೇ ಮಗ ಶಶಿಧರ್​ ವೃತ್ತಿಯಲ್ಲಿ ಡ್ರೈವರ್​ ಆಗಿದ್ದು, ಇದೇ ಗ್ರಾಮದಲ್ಲಿ ಎಂ.ಟೆಕ್ ಓದುತ್ತಿದ್ದ ಅಕ್ಷತಾ ಎಂಬುವಳನ್ನು ಪ್ರೀತಿಸುತ್ತಿದ್ದು, ಕಳೆದ 4 ವರ್ಷಗಳಿಂದ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದರು ಎನ್ನಲಾಗಿದೆ.  ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಜೊತೆಯಾಗಿ ಮೈಸೂರಿನ ಸುತ್ತಮುತ್ತ, ಮಂಡ್ಯ, ಮಡಿಕೇರಿ ಹಾಗೂ ದೂರದ ಆಂಧ್ರಪ್ರದೇಶದ ನೂರಾರು ಪ್ರವಾಸಿತಾಣಗಳನ್ನು ಸುತ್ತಾಡಿದ್ದು, ಈ ವಿಚಾರ ಶಶಿಧರ್​ ತಾಯಿಗೂ ತಿಳಿದಿತ್ತು.  ಪರೀಕ್ಷೆಗಳು ಮುಗಿದ ತಕ್ಷಣ ತನ್ನನ್ನು ಅಕ್ಷತಾ ಮದುವೆ ಆಗುವುದಾಗಿ ಹೇಳಿದ್ದಾಳೆ ಎಂದು ತಾಯಿಗೆ ಹೇಳಿದ್ದ ಎಂದು ತಿಳಿದುಬಂದಿದೆ.
ಆದರೆ ಕಳೆದ ಸೆಪ್ಟಂಬರ್​ 8 ರಂದು ಬೆಳಿಗ್ಗೆ ಶಶಿಧರ್​ ಯಾವುದೋ ಮುಖ್ಯವಾದ ಕೆಲಸಕ್ಕಾಗಿ ಮೈಸೂರಿಗೆ ತೆರಳಿ, ಅಕ್ಷತಾ ಹಾಗೂ ಆಕೆಯ ತಂದೆ ಗಂಗಾಧರ್​ ಜೊತೆ ಮಾತನಾಡಿ ವಾಪಸ್​ ಬರುತ್ತೇನೆ ಎಂದಿದ್ದ. ಆದರೆ ಮಗ  ಮಾತ್ರ  ಹೆಣವಾಗಿ ಬಂದಿದ್ದು, ನಿಗೂಢವಾಗಿ ಸಾವನ್ನಪ್ಪಿದ್ದಾನೆ  ಎಂದು ಮಂಗಳಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಆತನ ಸ್ನೇಹಿತರು ನಿಮ್ಮ ಮಗ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿ ಆತನ ಶವವನ್ನು ಊರಿಗೆ ತಂದು, ಮರಣೋತ್ತರ ಪರೀಕ್ಷೆಯನ್ನೂ ಮಾಡಿಸದೆ ಅಂತ್ಯಕ್ರಿಯೆ ಮಾಡಿಸಿದ್ದಾರೆ. ಒಂದು ದಿನದ ನಂತರ ಆತನ ಮೊಬೈಲ್​ ಕೊಟ್ಟಾಗ ಅದರಲ್ಲಿ ಯಾವುದೇ ಎಲ್ಲವೂ ಡಿಲಿಟ್ ಆಗಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಶಶಿಧರ್​ ತಾನು ಮತ್ತು ಅಕ್ಷತಾ ಜೊತೆಯಾಗಿದ್ದ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ ನಂತರ ಆತನ ಸಾವು ಅನುಮಾನಾಸ್ಪದವಾಗಿ ಆಗಿರುವುದರಿಂದ ಅನುಮಾನಗಳು ಹೆಚ್ಚಾಗಿವೆ. ಈ ವೇಳೆ ಅಕ್ಷತಾ ಕೂಡ ಕರೆ ಮಾಡಿ ಶಶಿಧರ್​ ತಂಗಿಯನ್ನು ಎಚ್ಚರಿಸಿದ್ದಳು ಎನ್ನಲಾಗಿದೆ.
ಅದರಿಂದ ಭಯದಲ್ಲಿದ್ದ ಶಶಿಧರ್  ಮನೆಯವರು ಈಗ ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಮೈಸೂರು ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್​ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆದಿರುವುದು ಮೈಸೂರು ನಗರ ವ್ಯಾಪ್ತಿಯಾದ್ದರಿಂದ ತನಿಖೆಯನ್ನು ಮೈಸೂರಿನ ನಜರ್​ಬಾದ್​ ಪೊಲೀಸರಿಂದ ಮಾಡಿಸುವುದಾಗಿ ಮೈಸೂರು ನಗರ ಡಿಸಿಪಿ ಶೇಖರ್​ ತಿಳಿಸಿದ್ದಾರೆ.

Leave a Reply

comments

Related Articles

error: