ಕರ್ನಾಟಕ

ಕಿರುತೆರೆ ನಟ ರಾಜೇಶ್ ಧ್ರುವ ವಿರುದ್ಧ ಪತ್ನಿಯಿಂದ ದೂರು ದಾಖಲು

ಬೆಂಗಳೂರು,ಫೆ.22-`ಅಗ್ನಿಸಾಕ್ಷಿ’ ಧಾರಾವಾಹಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜೇಶ್ ಧ್ರುವ ಅವರ ಪತ್ನಿ ಶ್ರುತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವರದಕ್ಷಿಣೆ ತರುವಂತೆ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮದುವೆಯಾಗಿದ್ದರೂ ರಾಜೇಶ್ ಧ್ರುವ ಹೊರಗೆಲ್ಲೂ ಹೇಳಿಕೊಳ್ಳುತ್ತಿರಲಿಲ್ಲವಂತೆ. ನನಗೆ ಮದುವೆ ಆಗಿಲ್ಲ ಎಂದು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದರಂತೆ. ಅಲ್ಲದೆ, ಬೇರೆ ಯುವತಿಯರ ಜೊತೆಗೆ ರಾಜೇಶ್ ಧ್ರುವ ಅಫೇರ್ ಇಟ್ಟುಕೊಂಡಿದ್ದಾರೆ ಎಂದು ಶ್ರುತಿ ಆಪಾದಿಸಿದ್ದಾರೆ.

2017 ರಲ್ಲಿ ಶ್ರುತಿ ಎಂಬುವರನ್ನು ರಾಜೇಶ್ ಧ್ರುವ ಮದುವೆ ಆಗಿದ್ದರು. ಮದುವೆಗೂ ಮುನ್ನ ಇವರಿಬ್ಬರು ಲಿವಿಂಗ್ ಟು ಗೆದರ್ ರಿಲೇಷನ್ ಶಿಪ್ ನಲ್ಲಿದ್ದರು. ಬಳಿಕ ಕುಟುಂಬಸ್ಥರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಜೇಶ್ ಧ್ರುವ-ಶ್ರುತಿ ಮದುವೆ ಆದ್ಮೇಲೆ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು ಎನ್ನಲಾಗಿದೆ.

ರಾಜೇಶ್ ಧ್ರುವ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತ್ನಿ ಮಾಡಿರುವ ಆರೋಪ ಹಾಗೂ ದೂರಿನ ಬಗ್ಗೆ ಸ್ಪಷ್ಟನೆ ನೀಡಿರುವ ರಾಜೇಶ್ ಧ್ರುವ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ಮೂರು ಕಂಪ್ಲೇಂಟ್ ದಾಖಲಾಗಿದೆ. ಯಾರು ಯಾರಿಗೆ ಕಿರುಕುಳ ಕೊಟ್ಟಿದ್ದಾರೆ ಅನ್ನೋದು ದೂರಿನಲ್ಲೇ ಉಲ್ಲೇಖವಾಗಿದೆ ಎಂದು ಪತ್ನಿ ಶ್ರುತಿಗೆ ತಿರುಗೇಟು ಕೊಟ್ಟಿದ್ದಾರೆ.

ಕಳೆದ ವರ್ಷದ ಜುಲೈ ತಿಂಗಳಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲಾಗಿದೆ. ಆಗ ಯಾಕೆ ನನ್ನ ಮೇಲೆ ಶ್ರುತಿ ವರದಕ್ಷಿಣೆ ಕಿರುಕುಳದ ಆರೋಪ ಮಾಡಿಲ್ಲ.? ವರದಕ್ಷಿಣೆ ಕಿರುಕುಳ ಆರೋಪ ಮಾಡುತ್ತಿರುವವರು ಸಾಕ್ಷಿ ಕೊಡಲು ಹೇಳಿ ಎಂದಿದ್ದಾರೆ.

ನಮ್ಮಿಬ್ಬರ ನಡುವೆ ಮನಸ್ತಾಪ ಇದೆ. ಕೂತು ಮಾತನಾಡಿದರೂ, ಸಮಸ್ಯೆ ಬಗೆಹರಿದಿಲ್ಲ. ನಾನು ಏನೇ ಮಾಡಿದರೂ ಅನುಮಾನ ಪಡುತ್ತಾರೆ. ನಾನು ನಟ ಆಗಿರುವ ಕಾರಣಕ್ಕೆ ನ್ಯೂಸ್ ಚಾನೆಲ್ ಗೆ ಹೇಳುತ್ತೇನೆ ಎಂದು ಹೆದರಿಸುತ್ತಾರೆ ಎಂದು ಹೇಳಿದ್ದಾರೆ.

ನನ್ನ ತಾಯಿಗೆ ಶ್ರುತಿ ಮಾನಸಿಕ ಹಿಂಸೆ ನೀಡಿದ್ದಾರೆ. ಶ್ರುತಿ ಮಾಂಸಹಾರಿ. ಹೊರಗೆ ಮಾಂಸ ತಿಂದು ಮನೆಯಲ್ಲಿ ಮಡಿ-ಮೈಲಿಗೆಯನ್ನ ಹಾಳು ಮಾಡುತ್ತಾರೆ. ನನ್ನ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದಿದ್ದಾರೆ.

ಸದ್ಯ ರಾಜೇಶ್ ಧ್ರುವ ‘ತಕಧಿಮಿತ’ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: