ಪ್ರಮುಖ ಸುದ್ದಿ

ಮಗ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದಾನೆಂಬ ಕಾರಣಕ್ಕೆ ಬಿಸಿಯೂಟ ಸಿಬ್ಬಂದಿ ಮೇಲೆ ಹಲ್ಲೆ

ರಾಜ್ಯ(ಮಂಡ್ಯ)ಫೆ.22:-   ಬಿಸಿಯೂಟದ ಮಹಿಳಾ ಸಿಬ್ಬಂದಿಯೋರ್ವರ ಮೇಲೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯರು ಹಲ್ಲೆ ಮಾಡಿರುವ ಘಟನೆ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದಿ.ದೇವರಾಜು ಅವರ ಪತ್ನಿ ಮುತ್ತುರಾಜಮ್ಮನ ಮಗ ಶಿವರಾಜು ತೊಪ್ಪನಹಳ್ಳಿ ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಕಾರಣಕ್ಕೆ  ದಿ.ಪ್ರಕಾಶ್ ಅವರ ಬೆಂಬಲಿಗ ಮಹಿಳೆಯರು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮುತ್ತುರಾಜಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ 2003 ರಿಂದ ಬಿಸಿಯೂಟ ನೌಕರೆಯಾಗಿ ಕೆಲಸ ಮಾಡುತ್ತಿದ್ದರು ತೊಪ್ಪನಹಳ್ಳಿ ಪ್ರಕಾಶ್ ಕೊಲೆಯಾದ ನಂತರ  ಕೆಲಸಕ್ಕೆ ಬಂದಿರಲ್ಲಿಲ್ಲ. ಶಾಲೆಯ ಎಸ್‍.ಡಿ.ಎಂ.ಸಿ. ಸಮಿತಿ ಕೆಲಸಕ್ಕೆ ಹಾಜರಾಗುವಂತೆ ಮುತ್ತುರಾಜಮ್ಮ ಅವರಿಗೆ 3 ಬಾರಿ ನೋಟಿಸ್ ನೀಡಿದ ಕಾರಣ ಕೆಲಸಕ್ಕೆ ಬಂದಿದ್ದರು. ಶಾಲೆಯಲ್ಲಿ ಕೆಲಸ ಮಾಡಬಾರದು ಎಂದು ಪ್ರಕಾಶ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಏಕಾಏಕಿ ಶಾಲೆಗೆ ಆಗಮಿಸಿದ ಹಲವಾರು ಮಹಿಳೆಯರು ಮುತ್ತುರಾಜಮ್ಮ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಗ್ರಾಮದಲ್ಲೆ ವಾಸ್ತವ್ಯ ಮಾಡಿರುವ ಪೋಲೀಸರಿಗೆ ಮಾಹಿತಿ ಬಂದ ತಕ್ಷಣವೇ ಶಾಲೆಗೆ ಭೇಟಿ ನೀಡಿ ಮುತ್ತುರಾಜಮ್ಮಳನ್ನು ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾ ವರಿಷ್ಠಾಧಿಕಾರಿ ಬಲರಾಮೇಗೌಡ , ಡಿವೈಎಸ್ಪಿ ಶೈಲೇಂದ್ರ ,ತಹಶೀಲ್ದಾರ್ ಗೀತಾ ,  ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ , ಬಿ.ಇ.ಒ. ರೇಣುಕಮ್ಮ , ಎಸ್.ಡಿ.ಎಂ.ಸಿ. ಅಧ್ಯಕ್ಷ ಮುತ್ತಲಿಂಗಯ್ಯ , ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಮಂಗಳ , ಪಿಡಿಒ ಶೀಲಾ , ಮುಖ್ಯ ಶಿಕ್ಷಕ ಶಿವರಾಮ್ ಸಭೆ ನಡೆಸಿ ಗ್ರಾಮದ ಶಾಂತಿ  ಸುಭದ್ರತೆ ದೃಷ್ಟಿಯಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಮುತ್ತುರಾಜಮ್ಮ ಅವರನ್ನು ತಾತ್ಕಾಲಿಕವಾಗಿ ಕೆಲಸದಿಂದ ವಜಾ ಮಾಡುವಂತೆ ತೀರ್ಮಾನ ಕೈಗೊಳ್ಳಲಾಗಿದೆ.

ತೊಪ್ಪನಹಳ್ಳಿ ಗ್ರಾಮದಲ್ಲಿ 3 ವರ್ಷದ ಈಚೆಗೆ ಗ್ರಾಮದಲ್ಲಿ ಜೋಡಿಕೊಲೆ, ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತೊಪ್ಪನಹಳ್ಳಿ ಗ್ರಾಮದ  ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಹಾಗೂ ಗ್ರಾಮದ ಮುತ್ತುರಾಯಸ್ವಾಮಿ ದೇವಾಲಯದಲ್ಲಿ ಕಾವಲುಗಾರ ಸೇರಿದಂತೆ 4 ಜನರು ಕೊಲೆಯಾಗಿದ್ದು. ಗ್ರಾಮ ಇಂದಿಗೂ ಬಿಗುವಿನ ವಾತಾವರಣದಿಂದ ಕೂಡಿದೆ. ಗ್ರಾಮ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಈ ಸಂಬಂಧ  ಮದ್ದೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: