ದೇಶಪ್ರಮುಖ ಸುದ್ದಿ

ಮಹಾರಾಷ್ಟ್ರದಲ್ಲಿ ಲಘು ಸ್ಫೋಟ! ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ

ಮುಂಬೈ/ರಾಯಗಢ (ಫೆ.22): ವಾಣಿಜ್ಯ ನಗರಿ ಮುಂಬೈನ ಜನ ನಿಬಿಢ ಪ್ರದೇಶದಲ್ಲಿ ಇಂದು ಬೆಳಗ್ಗೆ ಸ್ಫೋಟವೊಂದು ಸಂಭವಿಸಿ ಭಾರೀ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಯ್‍ಗಢ್ ಜಿಲ್ಲಾಯ ಸರ್ಕಾರಿ ಬಸ್‍ನಲ್ಲಿ ಸುಧಾರಿತ ಸ್ಫೋಟಕ (ಐಇಡಿ) ಪತ್ತೆಯಾಗಿದೆ.
ಈ ಎರಡು ಘಟನೆಗಳ ಬಳಿಕ ಮಹಾರಾಷ್ಟ್ರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ಥಾಣೆ ಜಿಲ್ಲಾಯ ಮಿರಾ ರಸ್ತೆ ಸಮೀಪ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಆದರೆ ಇದರಲ್ಲಿ ಕಬ್ಬಿಣದ ಗುಂಡುಗಳನ್ನು ಬಳಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಅಲ್ಲದೇ ರಾಯ್ ಗಢದಲ್ಲಿ ಬಸ್ ನೊಳಗೆ ಐಇಡಿ ಪತ್ತೆಯಾಗಿದ್ದು, ಸ್ಫೋಟ ನಡೆಸಲು ಈ ಸಂಚು ನಡೆಸಲಾಗಿದೆ ಎಂದು ವರದಿ ಹೇಳಿದೆ. ಈ ಪ್ರಕರಣಗಳಲ್ಲಿ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ವರದಿಯಾಗಿಲ್ಲ. ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಎರಡೂ ಘಟನೆಗಳ ಬಗ್ಗೆ ತನಿಖೆ ಆರಂಭಿಸಿದೆ. ಎರಡೂ ಪ್ರದೇಶಗಳಿಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುಲ್ವಾಮಾ ಭಯೋತ್ಪಾದಕರ ದಾಳಿ ನಂತರ ಜೈಷ್-ಎ-ಮೊಹಮದ್ ಉಗ್ರರು ಇನ್ನೆರಡು ಭಾರೀ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದಾರೆಂಬ ಗುಪ್ತಚರ ಮಾಹಿತಿ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿನ ಈ ಎರಡು ಘಟನೆಗಳಿಂದ ರಾಷ್ಟಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿ ಶೋಧ ನಡೆಸುತ್ತಿದ್ದಾರೆ. (ಎನ್.ಬಿ)

Leave a Reply

comments

Related Articles

error: