ಪ್ರಮುಖ ಸುದ್ದಿಮೈಸೂರು

ಉದ್ಯೋಗವನ್ನು ಸದುಪಯೋಗಪಡಿಸಿಕೊಳ್ಳುವ ಜ್ಞಾನ ಅಗತ್ಯ : ಡಾ.ಡಿ.ವೀರೇಂದ್ರ ಹೆಗ್ಗಡೆ

ಉದ್ಯೋಗಕ್ಕೆ ಅದರದ್ದೇ ಆದ ಮೌಲ್ಯವಿರಬೇಕು. ಅವಕಾಶ ಸಿಕ್ಕರೆ ಸಾಲದು ಅದನ್ನು ಸದುಪಯೋಗಪಡಿಸಿಕೊಳ್ಳುವ ಜ್ಞಾನ ಅಗತ್ಯ  ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿರುವ ರುಡ್ ಸೆಟ್ ಸಂಸ್ಥೆಯ ಬೆಳ್ಳಿ ಹಬ್ಬದ  ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ನೆರವೇರಿಸಿದರು. ಬಳಿಕ  ಮಾತನಾಡಿದ ಅವರು ದೇಶಾದ್ಯಂತ 600 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲವೂ ಕೆನರಾಬ್ಯಾಂಕ್, ಲೀಡ್ ಬ್ಯಾಂಕ್ ಸಹಯೋಗದಲ್ಲಿ ನಡೆಯುತ್ತಿವೆ. ಮೂರು ವರ್ಷದಲ್ಲಿ 20ಲಕ್ಷ ಜನರು ಉದ್ಯೋಗ ತರಬೇತಿ ಪಡೆದುಕೊಂಡಿದ್ದಾರೆ. ಮೈಸೂರು ಸಂಸ್ಥೆಯೊಂದರಲ್ಲೇ 23,900ಜನರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಸಂಸ್ಥೆಯಲ್ಲಿ ಶೇಕಡಾ 72ರಷ್ಟು ಜನರು ತರಬೇತಿ ಪಡೆದು ಸ್ವಾವಲಂಬಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಕ್ಕೆ ಅದರದ್ದೇ ಆದ ಮೌಲ್ಯವಿದ್ದು, ಮೌಲ್ಯವನ್ನು ಕಡೆಗಣಿಸಬಾರದು ಎಂದರು.

ಬೆಂಗಳೂರಿನ ಎಫ್‌.ಕೆ.ಸಿ.ಸಿ.ಐ ಉಪಾಧ್ಯಕ್ಷ  ಸುಧಾಕರ ಶೆಟ್ಟಿ ಮಾತನಾಡಿ ಮಹಿಳೆಯರಿಗೆ ಜೀವನ ನಿರ್ವಹಿಸುವ ಶಿಕ್ಷಣದ ಅವಶ್ಯಕತೆಯಿದೆ. ಶೇ. 49 ಕ್ಕೂ ಹೆಚ್ಚು ಮಹಿಳೆಯರು ಇಂದು ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಶ್ಲಾಘನೀಯವಾಗಿದೆ ಎಂದರು.

ರುಡ್ ಸೆಟ್ ನಲ್ಲಿ ಟ್ರೈನಿಂಗ್ ಪಡೆದು ಸ್ವಂತ ಉದ್ಯೋಗ ಕೈಗೊಂಡು ಇತರೆ ಮಹಿಳೆಯರಿಗೆ ಕೆಲಸ ನೀಡಿ ಸನ್ಮಾನ ಸ್ವೀಕರಿಸಿದ ರುಕ್ಮಿಣಿ ಚಂದ್ರನ್ ಮಾತನಾಡಿ, 1994ರಲ್ಲಿ ಮಹಿಳೆಯರು ಹೊರಗೆ ಬರಲು ಹೆದರುತ್ತಿದ್ದರು. ಅಂದು ನನ್ನ ಗಂಡ ಅಪಘಾತವಾಗಿ ಹಾಸಿಗೆ ಹಿಡಿದಿದ್ದರು. ನನ್ನ ಮೂರು ಮಕ್ಕಳ ಸ್ಥಿತಿ ಏನೂ ಎಂಬ ಪ್ರಶ್ನೆ ಇತ್ತು. ಆ ವೇಳೆ ಫ್ಯಾಷನ್ ಆಗಿ ಟೈಲರಿಂಗ್ ಮಾಡುತ್ತಿದ್ದೆ. ಅಂದು ನನ್ನ ಬಾಳಿಗೆ ಬೆಳಕಾಗಿದ್ದು, ಆಸರೆ ಹಾಗೂ ರುಡ್ ಸೆಟ್ ಸಂಸ್ಥೆ. ಜೀವನದ ಕಲೆ ಎಂದರೆ ಏನೂ ಎಂಬುದನ್ನು ಕಲಿತುಕೊಂಡೆ ಎಂದರು.

ಸ್ವಾವಲಂಬಿಗಳಾಗಿ ಸಾಧನೆಗೈದ ಹಲವರನ್ನು ಸನ್ಮಾನಿಸಲಾಯಿತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಧ್ರುವಕುಮಾರ್, ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಮೋಹನ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: