ಕರ್ನಾಟಕಮೈಸೂರು

ನೀರು ಬಿಡುಗಡೆ ಬೇಡ, ಮಧ್ಯಸ್ಥಿಕೆ ವಹಿಸಬೇಕಾದ್ದು ಮೋದಿ ಕರ್ತವ್ಯ: ಮುಖ್ಯಮಂತ್ರಿಗೆ ಮಾಜಿ ಪ್ರಧಾನಿ ದೇವೇಗೌಡ ಸಲಹೆ

“ನಾನು 1996ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ನರ್ಮದಾ ನದಿ ಜಲಾಶಯದ ಬಗ್ಗೆ ಮೇಧಾ ಪಾಟ್ಕರ್ ದೂರಿನ ಬಗ್ಗೆ ಮಾತನಾಡಿದ್ದೇನೆ. ನಾವೆಲ್ಲರೂ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಅಂತೆಯೇ ಪ್ರಸ್ತುತ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಮೋದಿ ಯಾಕೆ ಪ್ರಯತ್ನಿಸುತ್ತಿಲ್ಲ?”

– ಬಿಜೆಪಿ ನಾಯಕರಿಗೆ ದೇವೇಗೌಡ ಪ್ರಶ್ನೆ

ಬೆಂಗಳೂರು: ಸುಪ್ರೀಂ ಕೋರ್ಟ್ ಅಥವಾ ಕಾವೇರಿ ನಿರ್ವಹಣಾ ಮಂಡಳಿಯಿಂದ ಕಾವೇರಿ ಬಿಕ್ಕಟ್ಟು ಪರಿಹಾರ ಅಸಾಧ್ಯ. ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಕರ್ನಾಟಕ ಮತ್ತು ತಮಿಳುನಾಡು ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂದು ಮಾಜಿ ಪ್ರಧಾನಿ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಕಾವೇರಿ ವಿವಾದದಲ್ಲಿ ರಾಜ್ಯಸರ್ಕಾರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೇವೇಗೌಡ ಸಂವಾದ ನಡೆಸಿದರು.

ನಮ್ಮ ರಾಜ್ಯದಲ್ಲಿ ನೀರಿಲ್ಲ. ಕೆಆರ್‍ಎಸ್ ಜಲಾಶಯಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ಮೈಸೂರು, ಮಂಡ್ಯ, ಬೆಂಗಳೂರು ನಗರಕ್ಕೆ ಇಲ್ಲಿಂದಲೇ ನೀರು ಸರಬರಾಜಾಗಬೇಕು. ಜಲಾಶಯದಲ್ಲಿ ಉಳಿದಿರುವ ಸ್ವಲ್ಪ ನೀರನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅದೂ ಈ ವರ್ಷದ ತಮಿಳುನಾಡಿನ ಮೂರನೇಯ ಬೆಳೆಯಾದ ಸಾಂಬಾ ಬೆಳೆಗೆ.

ನಮಗೆ ಕುಡಿಯಲು ನೀರಿಲ್ಲದಿದ್ದರೂ ಅವರ ಬೆಳೆಗೆ ನೀರು ಬಿಡುವಂತೆ ಆದೇಶಿಸಿರುವುದು ಏಕಪಕ್ಷೀಯ ಮತ್ತು ಪೂವ್ರಾಗ್ರಹ ಪೀಡಿತ ನಿರ್ಧಾರವಾಗಿದೆ. ಸುಪ್ರೀಂ ಕೋರ್ಟ್‍ ಪದೇ ಪದೇ ವಿವೇಚನಾರಹಿತ ತೀರ್ಪು ನೀಡುತ್ತಿರುವ ಕಾರಣ ಆದೇಶ ಪಾಲನೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವೇರಿ ವಿಚಾರದಲ್ಲಿ ಪ್ರಧಾನಿ ಪಾತ್ರ ಏನೂ ಇಲ್ಲ ಎಂಬ ಕರ್ನಾಟಕದ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, “ವಿವಾದ ಸುಪ್ರೀಂ ಕೋರ್ಟಿನಲ್ಲಿದ್ದರೂ ಪ್ರಧಾನಿ ಮಧ್ಯಪ್ರವೇಶಿಸಬಹುದು. ನಾನು 1996ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ನರ್ಮದಾ ನದಿ ಜಲಾಶಯದ ಬಗ್ಗೆ ಮೇಧಾ ಪಾಟ್ಕರ್ ದೂರಿನ ಬಗ್ಗೆ ಮಾತನಾಡಿದ್ದೇನೆ. ನಾವೆಲ್ಲರೂ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಅಂತೆಯೇ ಪ್ರಸ್ತುತ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಕೇಂದ್ರ ಯಾಕೆ ಪ್ರಯತ್ನಿಸುತ್ತಿಲ್ಲ?’ ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಬೇಡ. ಏನಾಗುತ್ತೋ ನೋಡೋಣ. ನಾನು ಈ ಹಿಂದೆ ಮೂರು ಬಾರಿ ರಾಜೀನಾಮೆ ನೀಡಿದ್ದೇನೆ. ಈಗಲೂ ರಾಜೀನಾಮೆ ನೀಡಲು ಸಿದ್ಧ. ಆದರೆ, ಲೋಕಸಭೆಯಲ್ಲಿ ಈ ಬಗ್ಗೆ ಹೋರಾಟ ಮಾಡುವುದಕ್ಕೆ ಆಗುವುದಿಲ್ಲ ಎಂಬ ನೋವಿದೆ. ಒಂದು ಲೋಟ ನೀರಿಗೂ ನಾವು ಅಮ್ಮನ ಮುಂದೆ ಕೈಚಾಚುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

comments

Related Articles

error: