
ಕರ್ನಾಟಕಪ್ರಮುಖ ಸುದ್ದಿ
ವ್ಯವಸ್ಥಿತವಾಗಿ ಚುನಾವಣಾ ಕಾರ್ಯ ನಿರ್ವಹಿಸುವಂತೆ ಮಂಡ್ಯ ಡಿ.ಸಿ ಸೂಚನೆ
ಮಂಡ್ಯ (ಫೆ.23): ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ತಮ್ಮ ಕರ್ತವ್ಯ ಹಾಗೂ ಜವಬ್ದಾರಿಗಳನ್ನು ಅರಿತು ಚುನಾವಣಾ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ತಿಳಿಸಿದರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆ ನೀತಿ ಸಂಹಿತೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ಚುನಾವಣಾ ಆಯೋಗದಿಂದ ಬರುವ ಮಾರ್ಗಸೂಚಿ ಹಾಗೂ ನೀತಿ ಸಂಹಿತೆಯ ಬಗ್ಗೆ ಅಧಿಕಾರಿಗಳು ತಿಳಿದು ಅದರ ಅನುಸಾರ ಕಾರ್ಯೋನ್ಮೂಖವಾಗಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಕುರಿತಂತೆ ಅಧಿಕಾರಿಗಳು ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಪ್ರತಿದಿನ ವರದಿಯನ್ನು ಕಚೇರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಚುನಾವಣಾ ಅಕ್ರಮ ತಡೆಗಟ್ಟುವಲ್ಲಿ ಫ್ಲೈಯಿಂಗ್ ಸ್ವಾಡ್ ಅತಿ ಮುಖ್ಯವಾದದ್ದು ಆಗಿದೆ. ಫ್ಲೈಯಿಂಗ್ ಸ್ವಾಡ್, ವಿಡಿಯೋ ಕಣ್ಗಾವಲು ತಂಡ, ಸ್ಟ್ಯಾಟಿಕ್ ಕಣ್ಗಾವಲು ತಂಡದ ಮುಖ್ಯಸ್ಥರು ತಮ್ಮ ಕರ್ತವ್ಯ ಹಾಗೂ ಜವಬ್ದಾರಿಗಳನ್ನು ಅರಿತು ಚುನಾವಣಾ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಪ್ರತಿದಿನ ವರದಿಯನ್ನು ತಂಡದ ಮುಖ್ಯಸ್ಥರು ಕಚೇರಿಗೆ ನೀಡಬೇಕು ಎಂದು ತರಬೇತಿಯಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಮಂಡ್ಯ ಲೋಕಸಭಾ ಸಾರ್ವತಿಕ ಚುನಾವಣೆ 2019ರ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಅದರ ಬಗ್ಗೆ ದೂರು ನೀಡಲು ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಿದೆ. “ಸಿ-ವಿಜಿಲ್” ಮೊಬೈಲ್ ಆಪ್ ಮೂಲಕ ನೀತಿ ಸಂಹಿತೆಯ ಉಲ್ಲಂಘನೆಯ ಬಗ್ಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿವಿ ಪ್ಯಾಟ್ ಬಳಕೆಯ ಬಗ್ಗೆ ಅಧಿಕಾರಿಗಳಿಗೆ ಪ್ರಾತ್ಯಕ್ಷತೆ ಏರ್ಪಡಿಸಿ ವಿವಿ ಪ್ಯಾಟ್ ಬಳಕೆಯ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಲಾಯಿತು. ಚುನಾವಣಾ ಕಾರ್ಯವನ್ನು ಲೋಪವಿಲ್ಲದೇ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಯಾಲಕ್ಕಿಗೌಡ, ಮಂಡ್ಯ ಉಪವಿಭಾಗಧಿಕಾರಿಗಳಾದ ರಾಜೇಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. (ಎನ್.ಬಿ)