ಮೈಸೂರು

ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಜೆಡಿಎಸ್ ಅಭ್ಯರ್ಥಿ ಪರಿಮಳಾ ಶ್ಯಾಮ್ ಅವಿರೋಧ ಆಯ್ಕೆ : ಉಪಾಧ್ಯಕ್ಷರಾಗಿ ಗೌರಮ್ಮ ಸೋಮಶೇಖರ್

ಮೈಸೂರು,ಫೆ.23:- ಮೈಸೂರು ಜಿಲ್ಲಾ ಪಂಚಾಯತ್  ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ  ಚುನಾವಣೆಗೆ ಅಧ್ಯಕ್ಷೆಯಾಗಿ ಜೆಡಿಎಸ್ ಅಭ್ಯರ್ಥಿ ಪರಿಮಳಾ ಶ್ಯಾಮ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗೌರಮ್ಮ ಸೋಮಶೇಖರ್ ಅವರು ಆಯ್ಕೆಯಾಗಿದ್ದು ಚುನಾವಣಾಧಿಕಾರಿ ಯಶವಂತ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಬಿಜೆಪಿಗೆ ಜತೆ ಮೈತ್ರಿ ಕಡಿದುಕೊಂಡು ಕಾಂಗ್ರೆಸ್ ಜತೆ ಜೆಡಿಎಸ್  ಕೈ ಜೋಡಿಸಿದ್ದು, ಇದೀಗ ಜೆಡಿಎಸ್ ನ ಪರಿಮಳಾ ಶ್ಯಾಮ್   ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ  ಪರಿಮಳಾ ಶ್ಯಾಮ್ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಿಂದ ಗೌರಮ್ಮ ಸೋಮಶೇಖರ್,  ಬಿಜೆಪಿಯಿಂದ ಗುರುಸ್ವಾಮಿ ಕಣಕ್ಕಿಳಿದಿದ್ದು, ನಾಮಪತ್ರ ಸಲ್ಲಿಸಿದ್ದರು.   ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿಯ  ಗುರುಸ್ವಾಮಿ ನಾಮಪತ್ರ ಹಿಂಪಡೆದು, ಚುನಾವಣೆ ಬಹಿಷ್ಕರಿದರು.  ಜೆಡಿಎಸ್ ಕಾಂಗ್ರೆಸ್ ಮೈತ್ರಿಗೆ ಬಹುಮತವಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಗೌರಮ್ಮ ಸೋಮಶೇಖರ್ ಅವರು ಮೈಸೂರು ಜಿಪಂನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈಸಂದರ್ಭ ಚುನಾವಣಾ ಪ್ರಾದೇಶಿಕ ಆಯುಕ್ತರಾದ ಯಶವಂತ್, ಸಹಾಯಕ ಚುನಾವಣಾಧಿಕಾರಿ ರೂಪಾ, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಉಪಸ್ಥಿತರಿದ್ದರು. ಇದೇ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಇಬ್ಬರನ್ನು ಹೂ ಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭ ಮಾಜಿ ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹ್ಮದ್ ಮತ್ತಿತರರಿದ್ದರು.

ಮೈಸೂರು ಜಿಲ್ಲಾ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷಗಳ ಬಲಾ ಬಲ ಹೀಗಿದೆ. ಜಿಲ್ಲಾ ಪಂಚಾಯತ್ ಒಟ್ಟು ಸ್ಥಾನ 49. ಚುನಾವಣೆಯಲ್ಲಿ ಪಕ್ಷಗಳು ಪಡೆದ ಸ್ಥಾನಗಳು ಕಾಂಗ್ರೆಸ್ 22, ಜೆಡಿಎಸ್ 18, ಬಿಜೆಪಿ 8 ಹಾಗೂ ಪಕ್ಷೇತರ 1. ಶಾಸಕ ಅನಿಲ್ ಚಿಕ್ಕಮಾದು ಅವರಿಂದ  ತೆರವಾದ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಚುನಾವಣೆ ನಂತರ ಕಾಂಗ್ರೆಸ್ ನ 3 ಸದಸ್ಯರು ಜೆಡಿಎಸ್ ಬೆಂಬಲಿಸಿದ್ದರಿಂದ ಜೆಡಿಎಸ್ 20, ಕಾಂಗ್ರೆಸ್ 20 ಸ್ಥಾನ ಪಡೆದು ಸಮಬಲ ಸಾಧಿಸಿದ್ದವು. ಸದ್ಯ ಪಕ್ಷಗಳ ಬಲಾ ಬಲ ಕಾಂಗ್ರೆಸ್ 20, ಜೆಡಿಎಸ್ 20, ಬಿಜೆಪಿ 8 ಹಾಗೂ ಪಕ್ಷೇತರ ಓರ್ವರು ಇದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: