ಮೈಸೂರು

ಇತಿಹಾಸ ಕುರಿತು ವಿವರಿಸುವಲ್ಲಿ ಮುದ್ರಣ ಮಾಧ್ಯಮದ ಪಾತ್ರ ಹಿರಿದು : ಹೆಚ್.ಆರ್.ರಂಗನಾಥ್

‘ಇತಿಹಾಸದ ನಕ್ಷತ್ರಗಳು’ ಕೃತಿ ಲೋಕಾರ್ಪಣೆ

ಮೈಸೂರು,ಫೆ.23:- ಇತಿಹಾಸ ಕುರಿತು ವಿವರಿಸುವಲ್ಲಿ ಮುದ್ರಣ ಮಾಧ್ಯಮದ ಪಾತ್ರ ಹಿರಿದು ಎಂದು ಪಬ್ಲಿಕ್ ಟಿವಿ ಪ್ರಧಾನ ವ್ಯವಸ್ಥಾಪಕ ಹೆಚ್.ಆರ್.ರಂಗನಾಥ್ ತಿಳಿಸಿದರು.

ಅವರಿಂದು ಭಾರತೀಯ ವಿದ್ಯಾಭವನದಲ್ಲಿ   ಭಾರತೀಯ ವಿದ್ಯಾಭವನ, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಸಂಯುಕ್ತಾಶ್ರಯದಲ್ಲಿ ಡಾ.ಎ.ವಿ.ನರಸಿಂಹಮೂರ್ತಿ ಅವರ   ‘ಇತಿಹಾಸದ  ನಕ್ಷತ್ರಗಳು’ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.ಬಳಿಕ ಮಾತನಾಡಿದ ಅವರು ಇತಿಹಾಸಕ್ಕೆ ಅತ್ಯಂತ ಅಗೌರವ ತೋರಿಸುವ ಮಾಧ್ಯಮವೆಂದರೆ ಟಿವಿ. ಅದು ನನ್ನ ಅಭಿಪ್ರಾಯದಲ್ಲಿ. ಯಾಕೆಂದರೆ ಕೆಟ್ಟ ಕೆಟ್ಟದಾಗಿ ತೋರಿಸುತ್ತೇವೆ. ಆದರೆ ಮುದ್ರಣ ಮಾಧ್ಯಮದ ಪಾತ್ರ ಹಿರಿದು ಎಂದರು. ನಾಳೆಯೂ ಕೆಲಸ ಮಾಡುತ್ತೇವೆ. ನಾಳೆಯೂ ಇತಿಹಾಸವಾಗತ್ತೆ ಎಂಬುದನ್ನು ನಾವು ಮರೆಯುತ್ತೇವೆ. ಇತಿಹಾಸ ಸಂಬಂಧಿತ ಪುಸ್ತಕ ಹೊರ ತರುವುದು ಹುಡುಗಾಟಿಕೆಯಲ್ಲ. ಕಷ್ಟ. ‘ಮೂರ್ತಿಯವರು ಇದು ಕೊನೆಯ ಪುಸ್ತಕ ಎನ್ನುತ್ತಾರೆ. ಹಾಗೆ ಮಾಡಬೇಡಿ ನನ್ನನ್ನು ಉಳಿಸುವುದಕ್ಕಾದರೂ ಮತ್ತೊಂದು ಪುಸ್ತಕ ಹೊರತನ್ನಿ. ಯಾಕೆಂದರೆ ರಂಗನಾಥ ಅವರು ಬಿಡುಗಡೆಗೊಳಿಸಿದ ಮೂರ್ತಿಯವರ ಕೊನೆಯ ಪುಸ್ತಕ ಎಂದು ಇತಿಹಾಸದಲ್ಲಿ ದಾಖಲಾಗಿ ಬಿಡುತ್ತದೆ’ ಎಂದಾಗ ಸಭಿಕರು ಗೊಳ್ಳೆಂದು ನಕ್ಕರು.

ಇತಿಹಾಸದಿಂದ ಲಾಭವಿಲ್ಲ ಎಂಬ ಕೆಟ್ಟ ಅಭಿಪ್ರಾಯ ಬಹಳ ಜನರಲ್ಲಿದೆ. ನಮಗೆ ಅರಿವಿಗೆ ಬರಬೇಕಿದ್ದ, ನಮಗೆ ಗೊತ್ತು ಎಂದು ತಿಳಿಸುವ ಬಹಳ ಜನರ ಕಣ್ಣು ತೆರೆಸಲಿದೆ. ಇತಿಹಾಸ ಫಾಸ್ಟ್ ಫುಡ್ ತರ ಇಲ್ಲ. ಯಾವನಿಗೆ ಬೇಕು ಎಂಬ ಅಸಡ್ಡೆ ಬೇಡ. ಆಳುವ ಮಂದಿಗೆ ಬಹಳ ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬಾರದೆಂಬ ಮನಸ್ಸಿರತ್ತೆ. ಯಾಕೆಂದರೆ ಹುಳುಕುಗಳೆಲ್ಲ ಪ್ರಸ್ತಾಪವಾಗತ್ತೆ ಎಂಬ ಭಾವನೆಯಿದ್ದು, ಅವರ ಇತಿಹಾಸ ಮಾತ್ರ ಅವರಿಗೆ ನೆನಪಿರತ್ತೆ ಎಂದು ಟೀಕಿಸಿದರು. ನೀವು ಓದುತ್ತೀರೋ ಬಿಡುತ್ತೀರೋ ಗೊತ್ತಿಲ್ಲ. ಆದರೆ ಇರುವುದನ್ನು ಹಾಳು ಮಾಡಬೇಡಿ ಎಂದು ವಿನಂತಿಸಿದರು. ಇತಿಹಾಸದಲ್ಲಿರುವುದು ಎಲ್ಲವೂ ಸತ್ಯ ಅಲ್ಲ. ದಾಖಲೆ ಮಾಡುವವನು ತನಗೆ ಬೇಕಾದ ಹಾಗೆ ದಾಖಲಿಸುತ್ತಾನೆ. ಅದರಲ್ಲಿ ಸತ್ಯ, ಅಸತ್ಯವನ್ನು ನಾವು ಕಂಡು ಹಿಡಿಯಬೇಕು ಎಂದರು. ಈ ಕೃತಿಯಲ್ಲಿ ಸಣ್ಣ ಸಣ್ಣ ಲೇಖನಗಳು ಇವೆ. ‘ತಿರುಪತಿ ಹುಮಡಿಯಲ್ಲಿ ಸಿಕ್ಕಿದ ರೋಮ್ ಸಾಮ್ರಾಜ್ಯದ ನಾಣ್ಯ’ ದಲ್ಲಿ ರೋಮ್ ಸಾಮ್ರಾಜ್ಯದ ಬಗ್ಗೆ ಒಂದಷ್ಟು ಉಲ್ಲೇಖ ಬರತ್ತೆ. ಆ್ಯಪ್ ಹುಡುಗರಿಗೂ, ಫಾಸ್ಟ್ ಫುಡ್ ಹುಡುಗರಿಗೂ ಇಷ್ಟವಾಗಬಹುದು ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ, ಡಾ.ಎನ್.ಎಸ್.ತಾರಾನಾಥ್, ಟಿ.ಎಸ್.ಛಾಯಾಪತಿ, ಡಾ.ಎ.ಟಿ.ಭಾಷ್ಯಂ, ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ಕೆ.ಬಿ.ಗಣಪತಿ, ಕೃತಿಯ ಕರ್ತೃ ಡಾ.ಎ.ವಿ.ನರಸಿಂಹಮೂರ್ತಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: