ಮೈಸೂರು

ನಾಡೋಜ ಪುರಸ್ಕೃತ ಕೋ. ಚನ್ನಬಸಪ್ಪ ಅವರ ನಿಧನಕ್ಕೆ ಸಚಿವ ಜಿ.ಟಿ.ಡಿ. ಸಂತಾಪ

ಮೈಸೂರು,ಫೆ.23:- ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಭಾಷಾ ತಜ್ಞ, ಸಾಹಿತಿ ನಾಡೋಜ ಕೋ.ಚನ್ನಬಸಪ್ಪ ಅವರ  ನಿಧನಕ್ಕೆ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಜಿ ಟಿ ದೇವೇಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೋ.ಚನ್ನಬಸಪ್ಪ ಅವರು ವೃತ್ತಿಯಿಂದ ವಕೀಲ ಮತ್ತು ನ್ಯಾಯಾಧೀಶರಾದರೂ ಪ್ರವೃತ್ತಿಯಿಂದ ಸಾಹಿತಿಯಾಗಿ ಕನ್ನಡ ಸಾಹಿತ್ಯಕ್ಕೆ  ನೀಡಿದ ಕೊಡುಗೆ ಅವಿಸ್ಮರಣೀಯ. ಇವರು 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪ್ರಬುದ್ಧ ಲೇಖಕರಾಗಿದ್ದ ಇವರುಕುವೆಂಪು ಅವರಿಗೆ ಅತಿ ಆಪ್ತರಾಗಿದ್ದರು. ನಮ್ಮ‌ ಮೈಸೂರು ವಿವಿಯೊಂದಿಗೆ ನಿಕಟಸಂಬಂಧ ಇಟ್ಟುಕೊಂಡಿದ್ದ ಕೋ ಚೆನ್ನಬಸಪ್ಪ ಅವರು ಶ್ರೀ ರಾಮಾಯಣ ದರ್ಶನಂ ಮಹಾ ಕಾವ್ಯ ಸಮೀಕ್ಷೆ ಹಾಗೂ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದರು. 95 ವಯೋಮಾನದ ‌ಈ ಇಳಿವಯಸ್ಸಿನಲ್ಲೂ ನಾಡಿನ‌ ಹಲವು ಜ್ವಲಂತ ವಿದ್ಯಮಾನಗಳಿಗೆ ತಮ್ಮ ನಿಷ್ಠುರ ಅಭಿಪ್ರಾಯ ತಿಳಿಸುತ್ತಿದ್ದರು.

ಈ ಹಿರಿಯ ಚೇತನದ ನಿಧನವು ಕನ್ನಡದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಸಚಿವ ಜಿಟಿಡಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಮತ್ತು ಇವರ ಕುಟುಂಬಸ್ಥರಿಗೆ ತಾಯಿ ಚಾಮುಂಡೇಶ್ವರಿಯು ಶೋಕ ಭರಿಸುವ ಶಕ್ತಿ ನೀಡಲಿ ಎಂದು‌ ಪ್ರಾರ್ಥಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: