ಮೈಸೂರು

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮೂರು ಎಕರೆ ಕಾಳು ಮೆಣಸಿನ ಬಳ್ಳಿ ನಾಶ : ಚಿಕ್ಕಣ್ಣ ಆರೋಪ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಜ.10 ರಂದು ಬಳ್ಳೆ ಹಾಡಿಗೆ ಅರಣ್ಯ ಇಲಾಖೆಯ ನೌಕರರಾದ ಫಾರೆಸ್ಟರ್ ಶೇಖರಯ್ಯ, ಗಾರ್ಡ್ ಮಂಜುನಾಥ್, ವಾಚರ್ ಗಳಾದ ದೊಡ್ಡ ಅಪ್ಪಾಜಿ, ಉಮೇಶ ಮತ್ತು ಚಿನ್ನಸ್ವಾಮಿ ಅವರು ಏಕಾಏಕಿ ಬಂದು ಅಣ್ಣಯ್ಯ ಅಲಿಯಾಸ್ ಕಾಳ ಎಂಬ ಹಾಡಿ ಜನಾಂಗದ ವ್ಯಕ್ತಿ ಕೂಲಿ ಕೆಲಸಕ್ಕಾಗಿ ಕೊಡಗಿಗೆ ವಲಸೆ ಹೋಗಿರುವ ಸಮಯದಲ್ಲಿ ಅವರು ಬೆಳೆದಿದ್ದ 3 ಎಕರೆಯಲ್ಲಿನ 500 ಕಾಳು ಮೆಣಸಿನ ಬಳ್ಳಿಗಳನ್ನು ಬುಡ ಸಮೇತ ಕಿತ್ತು ಧ್ವಂಸ ಮಾಡಿದ್ದಾರೆ ಎಂದು ತಾಲೂಕು ಆದಿವಾಸಿ ಅರಣ್ಯ ಹಕ್ಕು ಸಮಿತಿಗಳ ಒಕ್ಕೂಟದ ನಿರ್ದೇಶಕ ಚಿಕ್ಕಣ್ಣ ಆರೋಪಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಈ ಬಗೆಗೆ ಸಂಬಂಧಪಟ್ಟ ಬೀಚನಹಳ್ಳಿ ಠಾಣೆಗೆ ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಅಲ್ಲದೇ ಜ.3 ರಂದು ಯಡಿಯಾಲ ಅರಣ್ಯ ವ್ಯಾಪ್ತಿಗೆ ಸೇರಿರುವ ಅಳಲಹಳ್ಳಿ ಅರಣ್ಯ ಇಲಾಖೆಯಯ ನೌಕರರಾದ ಆರ್.ಎಫ್.ಓ ಸಂದೀಪ್ ಮತ್ತು ಗಾರ್ಡ್ ‍ಗಳಾದ ನೂರ್ ಸಾಬ್, ಮಲ್ಲಿಕಾರ್ಜುನ, ಸುದರ್ಶನ್, ಓಬಣ್ಣ ಮತ್ತು ಫಾರೆಸ್ಟರ್ ಗಳಾದ ನಿಂಗಪ್ಪ, ವಾಚರ್ ಗಳಾದ ಮಹೇಶ್, ಸುರೇಂದ್ರ ರವರು ಅಳಲಹಳ್ಳಿ ಹಾಡಿಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದು, ಅದನ್ನು ಕೂಡ   ಸಂಬಂಧಪಟ್ಟ ಸರಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ  ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿಸಿದರು.

ಈ ಸಂಬಂಧ ಇನ್ನು ಮೂರು ದಿನಗಳಲ್ಲಿ ಬಳ್ಳೆ ಹಾಡಿ ಹಾಗೂ ಅಳಲಹಳ್ಳಿ ಹಾಡಿಯಲ್ಲಿ ನಡೆದಿರುವ ಘಟನೆಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಆಹೋ ರಾತ್ರಿ ನ್ಯಾಯ ಸಿಗುವವರೆಗೂ ನಿರಂತರ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಿರ್ದೇಶಕ ಜಿ.ಸ್ವಾಮಿ, ಹಾಡಿ ಜನಾಂಗದ ರಾಜು, ಕಾಳಕಲ್ಕ, ಮಾಸ್ತಿ, ನಿಂಗಾಜಮ್ಮ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: