ಮೈಸೂರು

ಯುಜಿಸಿ ಮಾನ್ಯತೆ ರದ್ದು ಹಿನ್ನಲೆ,ವಾರ್ಷಿಕ 6ಕೋಟಿ ರೂ.ನಷ್ಟ : ಪ್ರೊ.ಡಿ.ಶಿವಲಿಂಗಯ್ಯ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಮಾನ್ಯತೆ ರದ್ದಾಗಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ ವಾರ್ಷಿಕ 6 ಕೋಟಿ ರೂ. ನಷ್ಟವುಂಟಾಗಿದೆ.  ಇದುವರೆಗೆ ಅಂದಾಜು 110 ಕೋಟಿ ರೂ. ನಷ್ಟವಾಗಿದೆ. ನಷ್ಟ ಸರಿದೂಗಿಸಲು ಕಾರು, ಫೋನ್  ಕಡಿಮೆ ಬಳಸುತ್ತಿದ್ದೇವೆ. ಪ್ರಾದೇಶಿಕ ಕಚೇರಿಗಳನ್ನು ಮುಚ್ಚಿದ್ದೇವೆ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರೊ.ಡಿ.ಶಿವಲಿಂಗಯ್ಯ ಮಾತನಾಡಿ  ಕರ್ನಾಟಕದ ಒಳಭಾಗದಲ್ಲಿ ಮಾನ್ಯತೆ ನೀಡಲು ಯುಜಿಸಿಗೆ ಯಾವುದೇ ತೊಂದರೆ ಇಲ್ಲ. ಆದರೆ ಯಾಕೆ ವಿಳಂಬ ಆಗುತ್ತಿದೆಯೋ ಗೊತ್ತಿಲ್ಲ. 2013ರವರೆಗೆ 1,47,757 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 14,209 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಾಕಿ ಉಳಿದಿದೆ. ಈ ಪೈಕಿ 39,903 ವಿದ್ಯಾರ್ಥಿಗಳು ಕರ್ನಾಟಕದವರು ಮತ್ತು 1,07,854 ಹೊರ ರಾಜ್ಯದವರು. ಯುಜಿಸಿ ಕೋರ್ಸ್’ಗಳನ್ನು ಮಾತ್ರ ರಾಜ್ಯದ ಒಳಭಾಗದಲ್ಲೇ ಮಾಡುತ್ತಿದ್ದೇವೆ. ಆದ್ದರಿಂದ ರಾಜ್ಯದ ಒಳಭಾಗದಲ್ಲಿ ಕಾರ್ಯನಿರ್ವಹಣೆ ಮಾಡಲು ಮಾನ್ಯತೆ ನೀಡುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಯುಜಿಸಿ ಕೇಳಿದ್ದ ಎಲ್ಲ ದಾಖಲೆಗಳನ್ನು ಕೊಟ್ಟಿದ್ದೇವೆ. ಆದ್ದರಿಂದ ಶೀಘ್ರದಲ್ಲೇ ಮಾನ್ಯತೆ ಸಿಗುವ ವಿಶ್ವಾಸವಿದೆ. ಯಾವಾಗ ಮಾನ್ಯತೆ ಸಿಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಯುಜಿಸಿ ಮೇಲೆ ವಿಶ್ವಾಸವಿದೆ ಎಂದು ತಿಳಿಸಿದರು.
ಕೆ.ಎಸ್.ಒ.ಯು. ಮಾನ್ಯತೆ ರದ್ದು ಮಾಡಲು ಕರ್ನಾಟಕದ ಹೊರಭಾಗದಲ್ಲಿ ಪ್ರಾದೇಶಿಕ ಸಂಸ್ಥೆ ತೆರೆದಿರುವುದೇ ಕಾರಣವಾಗಿತ್ತು. 2016ರ ಜೂನ್’ನಲ್ಲಿ ಯುಜಿಸಿ  ಭೇಟಿ ಮಾಡಿದ್ದೇನೆ. ಇದುವರೆಗೆ 8ಬಾರಿ ಯುಜಿಸಿ ಭೇಟಿ ಮಾಡಿದ್ದೇನೆ. ಯುಜಿಸಿ ಕೇಳಿದ ಎಲ್ಲ ದಾಖಲೆಗಳನ್ನು ನೀಡಿದ್ದೇನೆ. 2016ರ ಡಿಸೆಂಬರ್’ನಲ್ಲಿ ಸಂಯೋಜನೆ ಪಡೆದ 205 ಸಂಸ್ಥೆಗಳು, 404 ಅಧ್ಯಯನ ಕೇಂದ್ರಗಳು, ಅವುಗಳ ವಿಳಾಸ, ವೆಬ್‌ಸೈಟ್ ಮಾಹಿತಿ, ಸಿಲೆಬಸ್, ರಾಜ್ಯವಾರು ವಿದ್ಯಾರ್ಥಿಗಳ ಮಾಹಿತಿ ಸೇರಿದಂತೆ 15,000 ಪುಟಗಳ ದಾಖಲೆ ನೀಡಿದ್ದೇವೆ. ಇದರೊಂದಿಗೆ ಮೂರು ರೀತಿಯ ಮಾನ್ಯತೆ ನೀಡಬೇಕೆಂದು ಕೇಳಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಸೋಮಶೇಖರ್, ಹಣಕಾಸು ಅಧಿಕಾರಿ ಖಾದರ್ ಪಾಷಾ ಉಪಸ್ಥಿತರಿದ್ದರು.

Leave a Reply

comments

Related Articles

error: