ಪ್ರಮುಖ ಸುದ್ದಿಮೈಸೂರು

ಮಾ.1,2ರ 34ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಲಿದೆ ಸುತ್ತೂರು

ವಿಭಿನ್ನ ಹಾಗೂ ವಿಶೇಷತೆಗಳನ್ನೊಳಗೊಂಡ ಸಮ್ಮೇಳನ : ಸಿ.ಕೆ.ಮಹೇಂದ್ರ

ಮೈಸೂರು, ಫೆ.26 : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಜಿಲ್ಲಾ ಪತ್ರಕರ್ತರ ಸಂಘ ಮೈಸೂರು ಇವರ ಸಹಯೋಗದಲ್ಲಿ ಮಾ.1 ಮತ್ತು 2ರಂದು ಸುತ್ತೂರಿನಲ್ಲಿ ಆಯೋಜಿಸಿರುವ 34 ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಸಮ್ಮೇಳನ ಕುರಿತು ಹಾಗೂ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ.ಕೆ.ಮಹೇಂದ್ರ ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಮ್ಮೇಳನದ ಪೂರ್ವ ಭಾವಿ ಸಿದ್ಧತೆ ಬಗ್ಗೆ ತಿಳಿಸಿ. ಪತ್ರಕರ್ತರ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ಪತ್ರಕರ್ತ ರಾಜಶೇಖರ್ ಕೋಟಿ ಹೆಸರಿನಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನದಲ್ಲಿ ಮೊಳೆ ಅಚ್ಚು ಮುದ್ರಣ ಯಂತ್ರ ,ಹಳೇ ಕಾಲದ ರೇಡಿಯೋ, ಕ್ಯಾಮೆರಾ ಹಾಗೂ ಹಳೇ ಟಿವಿಗಳ ಪ್ರದರ್ಶನ, ಆಕಾಶವಾಣಿ ತಾಂತ್ರಿಕ ಮಾಹಿತಿಯನ್ನು ಮೈಸೂರು ಆಕಾಶವಾಣಿ ತಂತ್ರಜ್ಞರು ಪ್ರಸ್ತುತಪಡಿಸಲಿದ್ದಾರೆ.

ಟಿ.ಎಸ್.ಸತ್ಯನ್ ಹೆಸರಿನಲ್ಲಿ ಪತ್ರಿಕಾ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನ,ವಸ್ತುಪ್ರದರ್ಶನದಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ವರದಿಗಳನ್ನು ಪ್ರಕಟಿಸಲಾಗುವುದು.ಪ್ರಜಾಮತ ಪತ್ರಿಕೆ ಸಂಪಾದಕರಾಗಿದ್ದ ಕೇಂದ್ರದ ಪೆಟ್ರೋಲಿಯಂ ಸಚಿವ ಎಂ.ಎಸ್.ಗುರುಸ್ವಾಮಿ,ಹಿರಿಯ ಪತ್ರಕರ್ತ ದಿ.ವೆಂಕಟಕೃಷ್ಣಯ್ಯ,ಆಗರಂ ರಂಗಯ್ಯ ರವರ ಹೆಸರನ್ನು ಮಹಾಧ್ವಾರಗಳಿಗೆ ನಾಮಕರಣ ಮಾಡಲಾಗಿದೆ.ಪ್ರಧಾನ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ,ಮಹಾಮಂಟಪಕ್ಕೆ ಡಿ.ವಿ.ಗುಂಡಪ್ಪ ಹೆಸರಿಡಲಾಗಿದೆ.ಇದೇ ಮೊದಲ ಬಾರಿಗೆ ಸಮಾನಾಂತರ ವೇದಿಕೆ ಸೃಷ್ಠಿಸಲಾಗಿದ್ದು,ದಿ.ಚಂದ್ರಶೇಖರ್ ಕುಕ್ಕಿಕಟ್ಟೆ ಹಾಗೂ ವೇದಿಕೆಗೆ ನಂಜನಗೂಡು ತಿರುಮಲ ಹೆಸರಿಡಲಾಗಿದೆ.ಉಳಿದಂತೆ ಮೈಸೂರಿನಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರ ಹೆಸರಿನಲ್ಲಿ ಸ್ಥಾವರ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಮಾರ್ಚ್ 1 ರಂದು ಸುತ್ತೂರು ಶ್ರೀಕ್ಷೇತ್ರದ ಪೀಠಾಧಿಪತಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ,ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥ ಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ ಸಿ.ಎಂ.ಕುಮಾರಸ್ವಾಮಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರವರಿಂದ ಸಾಧ್ವಿ ಸುದ್ದಿಕೋಶ ಲೋಕಾರ್ಪಣೆ, ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯಚಿತ್ರಕ್ಕೆ ಚಾಲನೆ, ಸಚಿವ ಸಾ.ರಾ.ಮಹೇಶ್ ವಸ್ತುಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಸದ ಆರ್.ದೃವನಾರಾಯಣ್ ಸಾಕ್ಷ್ಯಚಿತ್ರ ಉದ್ಘಾಟಿಸುವರು, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಛಾಯಾಚಿತ್ರ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮಾಧ್ಯಮ ಮತ್ತು ರಾಜಕಾರಣ ಕುರಿತು ಗೋಷ್ಠಿ,ಮಹಿಳಾ ಗೋಷ್ಠಿ,ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಶತಾಯುಷಿ ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಗುವುದು.

ಶ್ರೀಲಂಕಾದ ಡೈಲಿ ಮಿರರ್ ಪತ್ರಿಕೆ ಸಂಪಾದಕ ಕುರುಲು ಕೂಜಾಣ ಕರಿಯಕರವಣ,ಶ್ರೀ ಲಂಕಾದ ಅಂತರಾಷ್ಟ್ರೀಯ ಫೋಟೋ ಜರ್ನಲಿಸ್ಟ್ ಗೀತಿಯಾ ತಾಲೂಕದಾರ್, ನೇಪಾಳದ ಮೆಟ್ರೋ ಎಫ್ ಎಂ ಸುದ್ದಿ ಸಂಪಾದಕ ಆಶೋಕ ಸಿಲ್ವಿಲ್ ಸಮ್ಮೇಳನಕ್ಕೆ ಆಗಮಿಸಲಿದ್ದಾರೆ.ಎಲ್ಲಾ ಪತ್ರಕರ್ತರು ಸಮ್ಮೇಳನಕ್ಕೆ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಆನ್ ಲೈನ್ ಮೂಲಕ 300ಕ್ಕೂ ಹೆಚ್ಚು ಪತ್ರಕರ್ತರು ನೊಂದಾಯಿಸಿಕೊಂಡಿದ್ದು, ವೆಬ್ ಸೈಟ್ ಹಾಗೂ ಆಪ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮ್ಮೇಳನಕ್ಕೆ ಮೈಸೂರಿನ ಹೋಟೆಲ್ ಅಸೋಸಿಯೇಷನ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಪೆಟ್ರೋಲಿಯಂ ಅಸೋಸಿಯೇಷನ್ ಹಾಗೂ ಇತರ ಸಂಘ ಸಂಸ್ಥೇಗಳು ಸಮ್ಮೇಳನಕ್ಕೆ ಸಹಾಯಹಸ್ತ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು,ಕಾರ್ಯದರ್ಶಿ ಬಿ.ರಾಘವೇಂದ್ರ, ಸಂಚಾಲಕ ಎಂ.ಆರ್,ಸತ್ಯನಾರಾಯಣ, ಉಪಾಧ್ಯಕ್ಷ ಸುಬ್ರಹ್ಮಣ್ಯ, ಧರ್ಮಪುರ ನಾರಾಯಣ್, ದಕ್ಷಿಣ ಮೂರ್ತಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: