ದೇಶ

ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್ ನ ಮೂರು ಜೆಟ್ ಗಳು

ಶ್ರೀನಗರ,ಫೆ.27-ಪಾಕಿಸ್ತಾನದ ಮೂರು ಜೆಟ್ ಗಳು ಭಾರತೀಯ ವಾಯುಗಡಿ ಉಲ್ಲಂಘಿಸಿ ಗಡಿಯೊಳಗೆ ಪ್ರವೇಶಿಸಲು ಯತ್ನಿಸಿವೆ. ಆದರೆ ಭಾರತೀಯ ವಾಯುಪಡೆಯ ವಿಮಾನಗಳು ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಬುಧವಾರ ಬೆಳಿಗ್ಗೆ ಪಾಕ್ ಜೆಟ್ ಗಳು ಗಡಿಯೊಳಗೆ ಪ್ರವೇಶಿಸಲು ಯತ್ನಿಸಿವೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ಭಾರತೀಯ ವಾಯುಪಡೆ ಪಾಕ್‌ನ ಎಫ್-16 ವಿಮಾನಕ್ಕೆ ತಕ್ಕ ಉತ್ತರ ನೀಡಿದ್ದು, ಪಾಕ್ ವಿಮಾನಗಳು ಪಲಾಯನ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಪಾಕ್ ಗಡಿಯೊಳಗೆ ಪ್ರವೇಶಿಸಿ ಮೂರು ಕಡೆಗಳಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ದಾಳಿ ನಡೆಸಿ ಉಗ್ರನೆಲೆಗಳನ್ನು ಧ್ವಂಸಗೊಳಿಸಿತ್ತು. ಇದಾದ ಬಳಿಕ ಪಾಕಿಸ್ತಾನ ಪ್ರತೀಕಾರದ ಎಚ್ಚರಿಕೆ ನೀಡಿತ್ತು.

ಅದರಂತೆ ಪಾಕ್ ಜೆಟ್ ಗಳು ಭಾರತದ ವಾಯುಗಡಿ ಉಲ್ಲಂಘಿಸಿ ಗಡಿಪ್ರವೇಶಿಸಲು ಯತ್ನಿಸಿದೆ. ನಿಯಂತ್ರಣ ರೇಖೆಯ ಕೆಲವು ಕಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದ್ದ ಪಾಕ್ ಪಡೆಗಳಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದರು.

ಇದೇ ವೇಳೆ ಬುಧವಾರ ಬೆಳಗ್ಗೆ, ಶೋಪಿಯಾನ್‌ ಜಿಲ್ಲೆಯಲ್ಲಿ ಉಗ್ರರ ಅಡಗುದಾಣವನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದ ಭದ್ರತಾ ಪಡೆಗಳು ಇಬ್ಬರು ಜೈಷೆ ಮೊಹಮ್ಮದ್ ಉಗ್ರರನ್ನು ಹತ್ಯೆ ಮಾಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: