ಪ್ರಮುಖ ಸುದ್ದಿ

ಮಳೆಹಾನಿ ಪರಿಹಾರದ ಕಾಮಗಾರಿಯಲ್ಲೂ ಪ್ರಚಾರ ರಾಜಕಾರಣ : ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಟೀಕೆ

ರಾಜ್ಯ(ಮಡಿಕೇರಿ) ಫೆ.27 : – ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಶಾಸಕ ಕೆ.ಜಿ.ಬೋಪಯ್ಯ ಅವರು ಮತ್ತೆ ತಮ್ಮ ಹಳೆಯ ಚಾಳಿಯಂತೆ ವಿವಿಧ ಕಾಮಗಾರಿಗಳಿಗೆ ಸರಣಿ ಭೂಮಿ ಪೂಜೆಯನ್ನು ಮಾಡುತ್ತಾ ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎಸ್.ರಮಾನಾಥ್, ಶಾಸಕರ ಈ ಧೋರಣೆಯನ್ನು ಪಕ್ಷ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಪ್ರಕೃತಿ ವಿಕೋಪದಿಂದ ನಲುಗಿ ಹೋಗಿರುವ ಜಿಲ್ಲೆಯ ಜನರಿಗೆ ಪುನರ್‍ವಸತಿ ಮತ್ತು ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ಕೋಟ್ಯಾಂತ ರೂ. ಹಣವನ್ನು ನೀಡಿದೆ. ಅಲ್ಲದೆ ವಿವಿಧ ಸಂಘ ಸಂಸ್ಥೆ ಮತ್ತು ಸಾರ್ವಜನಿಕ ವಲಯದಿಂದಲೂ ಆರ್ಥಿಕ ನೆರವು ದೊರೆತಿದೆ. ಆದರೆ ಶಾಸಕ ಬೋಪಯ್ಯ ಅವರು ಪ್ರಕೃತಿ ವಿಕೋಪದ ಪರಿಹಾರ ನಿಧಿಯಲ್ಲಿ ನಡೆಯುತ್ತಿರುವ ರಸ್ತೆಗಳ ಅಭಿವೃದ್ಧಿಗೆ ಭೂಮಿ ಪೂಜೆ ಮಾಡುತ್ತ ಪ್ರಚಾರ ಪಡೆಯುವುದರೊಂದಿಗೆ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ರಮಾನಾಥ್ ಟೀಕಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ ಹಾಗೂ ಸುನೀಲ್ ಸುಬ್ರಮಣಿ ವೈಯುಕ್ತಿಕ ಪ್ರತಿಷ್ಠೆಗಾಗಿ ಮಳೆಹಾನಿ ಪರಿಹಾರದ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸದೆ ತಮ್ಮ ಘನತೆಯನ್ನು ಮೆರೆದಿದ್ದಾರೆ. ಆದರೆ ಸದಾ ತಮ್ಮ ಕಾರಿನಲ್ಲಿ ಗುದ್ದಲ್ಲಿಯನ್ನಿಟ್ಟುಕೊಂಡು ಓಡಾಡುವ ಬೋಪಯ್ಯ ಅವರು ಚುನಾವಣೆಯ ಸಂದರ್ಭದಲ್ಲಿ ಭೂಮಿ ಪೂಜೆಯ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ರಮಾನಾಥ್ ಆರೋಪಿಸಿದರು.

ಪಾರಾಣೆ ಗ್ರಾ.ಪಂ ಮಾಜಿ ಸದಸ್ಯ ಬೊಳ್ಳಂಡ ಶರಿ ಗಿರೀಶ್ ಮಾತನಾಡಿ, ಶಾಸಕರ ನಾಟಕದ ಪ್ರಸಂಗವನ್ನು ಯಾರದರು ಸಹಜವಾಗಿ ಪ್ರಶ್ನಿಸಿದ್ದಲ್ಲಿ ಅಂತವರ ಮೇಲೆ ದಬ್ಬಾಳಿಕೆ ನಡೆಸುವುದಲ್ಲದೆ ಸೇಡು ತೀರಿಸಿಕೊಳ್ಳುವ ಹಿಟ್ಲರ್ ವರ್ತನೆಯೂ ಪ್ರತಿಬಿಂಬಿತವಾಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ ಅವರ ಶಿಫಾರಸ್ಸಿನ ಮೇಲೆ ಕೊಣಂಜಗೇರಿ ಗ್ರಾ.ಪಂ ವ್ಯಾಪ್ತಿಯ ಕೈಕಾಡು, ಕಿರುಂದಾಡು, ಎತ್ತುಕಾಡು ಸಂಪರ್ಕ ರಸ್ತೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮೂಲಕ 30 ಲಕ್ಷ ರೂ. ಗಳ ಕ್ರಿಯಾ ಯೋಜನೆ ಅನುಮೋದನೆಗೊಂಡು ಕಾಮಗಾರಿ ಕಳೆದ ಡಿ.28 ರಂದು ಆರಂಭಗೊಂಡಿತ್ತು. ಆದರೆ ಆರಂಭಗೊಂಡ ಕಾಮಗಾರಿಗೆ ಇದೇ ಜನವರಿ 3 ರಂದು ಗ್ರಾ.ಪಂ ಗೆ ಯಾವುದೇ ಮಾಹಿತಿ ನೀಡದೆ ಪೊಲೀಸರ ರಕ್ಷಣೆಯಲ್ಲಿ ಶಾಸಕರು ತಮ್ಮ ಹಿಂಬಾಲಕರೊಂದಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ಇದಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾ.ಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿ ಸೇಡಿನ ರಾಜಕಾರಣ ಮಾಡುತ್ತಿರುವ ಶಾಸಕರು ಕಾಮಗಾರಿಯ ಬದಲಾವಣೆಗೆ ಮುಂದಾಗಿದ್ದಾರೆ. ಇದು ಶಾಸಕರ ಜನ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ ಶರಿ, ಉದ್ದೇಶಿತ ಕಾಮಗಾರಿಯನ್ನು ಈ ಹಿಂದಿನ ಯೋಜನೆಯಂತೆ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಹೋರಾಟ ರೂಪಿಸುವುದಾಗಿ ಎಚ್ಚರಿಗೆ ನೀಡಿದರು.

ಶಾಸಕರು ಹಾಗೂ ಜಿ. ಪಂ. ಸದಸ್ಯರು ನಮ್ಮ ಗ್ರಾಮಕ್ಕೆ ಏನನ್ನು ನೀಡಿದ್ದಾರೆ ಎನ್ನುವುದನ್ನು ಮೊದಲು ಸಾಬೀತು ಪಡಿಸಲಿ ಎಂದು ಸಾವಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ಜಿ.ಕುಟ್ಟಯ್ಯ, ಕೆ.ಯು.ಹ್ಯಾರೀಸ್ ಹಾಗೂ ಪಾರಾಣೆ ಗ್ರಾ.ಪಂ ಅಧ್ಯಕ್ಷೆ ವನಿತಾತಮ್ಮಯ್ಯ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: