ಪ್ರಮುಖ ಸುದ್ದಿವಿದೇಶ

ಪೈಲಟ್ ಅಭಿನಂದನ್ ರನ್ನು ಬಿಡುಗಡೆ ಮಾಡಿ: ಪಾಕ್ ಲೇಖಕಿಯ ಆಗ್ರಹ

ವಾಷಿಂಗ್ಟನ್,ಫೆ.28-ಭಾರತದ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಖ್ಯಾತ ಲೇಖಕಿ, ಪಾಕಿಸ್ತಾನ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೊ ಅವರ ಮೊಮ್ಮಗಳು ಫಾತಿಮಾ ಭುಟ್ಟೊ ಒತ್ತಾಯಿಸಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ನಲ್ಲಿ ಫಾತಿಮಾ ಭುಟ್ಟೊ ಬರೆದಿರುವ ಲೇಖನದಲ್ಲಿ `ನಾನು ಮತ್ತು ಪಾಕಿಸ್ತಾನದ ಹಲವು ಯುವಕರು ಭಾರತೀಯ ಪೈಲಟ್ ಅನ್ನು ಇಡುಗಡೆ ಮಾಡಬೇಕು ಎಂಬ ಅಭಿಪ್ರಾಯ ಹೊಂದಿದ್ದೇವೆ. ನಮಗೆ ಬೇಕಿರುವುದು ಶಾಂತಿ, ಮಾನವೀಯತೆ ಮತ್ತು ಘನತೆಎಂದು ಬರೆದಿದ್ದಾರೆ.

`ನಾವು ಯುದ್ಧದ ಅವಧಿಯಲ್ಲಿ ಜೀವನ ಸಾಗಿಸಿದ್ದೇವೆ. ಪಾಕಿಸ್ತಾನಿ ಸೈನಿಕರು ಸಾಯುವುದನ್ನು ನಾವು ಬಯಸುವುದಿಲ್ಲ. ಅಂತೆಯೇ ಭಾರತೀಯ ಸೈನಿಕರೂ ಕೂಡಾ. ನಾವು ಅನಾಥರ ಉಪಖಂಡವಾಗಬಾರದು’ ಎಂದು ಭುಟ್ಟೊ ಬರೆದಿದ್ದಾರೆ.

ನಮ್ಮ ಪೀಳಿಗೆಯ ಪಾಕಿಸ್ತಾನಿಗಳು ಮಾತನಾಡುವ ಹಕ್ಕಿಗಾಗಿ ಹೋರಾಡಿದೆವು; ಶಾಂತಿಗಾಗಿ ನಾವು ಧ್ವನಿ ಎತ್ತುವುದಕ್ಕೆ ಹೆದರುವುದಿಲ್ಲ. ಪಾಕಿಸ್ತಾನದ ಇತ್ತೀಚಿನ ಇತಿಹಾಸ ರಕ್ತಸಿಕ್ತವಾಗಿದೆ. ಇದರಿಂದ ಹೆಚ್ಚು ತೊಂದರೆಗೀಡಾದವರು ಸ್ವಂತ ದೇಶದ ನಾಗರಿಕರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಿಲಿಟರಿ ಸರ್ವಾಧಿಕಾರಿ ಆಳ್ವಿಕೆ, ಭಯೋತ್ಪಾದನೆ ಹಾಗೂ ಅನಿಶ್ಚಿತತೆಯ ಅನುಭವ ಇರುವ ನಮ್ಮ ಪೀಳಿಗೆ ಯಾವುದೇ ಬಗೆಯ ಯುದ್ಧ ಅಥವಾ ಆಡಂಬರದ ದೇಶಭಕ್ತಿಯ ದಾಹವನ್ನೂ ಹೊಂದಿಲ್ಲ. ಅದನ್ನು ಸಹಿಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮಂತೆಯೇ ದೊಡ್ಡ ಸಂಖ್ಯೆಯ ಯುವ ಪಾಕಿಸ್ತಾನಿಗಳು ಸಂಘರ್ಷದ ಸ್ಥಿತಿಯನ್ನು ಬಯಸುವುದಿಲ್ಲ ಎಂದು ಫಾತಿಮಾ ಭುಟ್ಟೊ ಲೇಖನದಲ್ಲಿ ಬರೆದಿದ್ದಾರೆ. (ಎಂ.ಎನ್)

Leave a Reply

comments

Related Articles

error: