ದೇಶ

ಅಭಿನಂದನ್ ಬಗ್ಗೆ ನಮಗೆ ಅಭಿಮಾನವಿದೆ: ತಂದೆಯ ಭಾವುಕ ನುಡಿ

ನವದೆಹಲಿ,ಫೆ.28-ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ತಂದೆ ಆತನ ಬಗ್ಗೆ ನಮಗೆ ಅಭಿಮಾನವಿದೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಧಮಾನ್ ಅವರು ಮಾತನಾಡಿ, ಸ್ನೇಹಿತರೆ, ನಿಮ್ಮೆಲ್ಲರ ಕಾಳಜಿ, ಪ್ರಾರ್ಥನೆಗೆ ಧನ್ಯವಾದಗಳು. ದೇವರ ದಯೆಯಿಂದ ಅಭಿನಂದನ್ ಜೀವಂತವಾಗಿದ್ದಾನೆ, ಗಾಯಗೊಂಡಿಲ್ಲ, ಮಾನಸಿಕವಾಗಿಯೂ ದೃಢವಾಗಿದ್ದಾನೆ. ಧೈರ್ಯವಾಗಿ ಆತ ಮಾತಾಡಿರುವ ರೀತಿ ನೋಡಿ… ಆತನೇ ನಿಜವಾದ ಸೈನಿಕ… ಆತನ ಬಗ್ಗೆ ನಮಗೆ ಅಭಿಮಾನವಿದೆ ಎಂದಿದ್ದಾರೆ.

ನನಗೆ ಗೊತ್ತು, ನಿಮ್ಮೆಲ್ಲರ ಆಶೀರ್ವಾದ, ದೇವರ ದಯೆ ಆತನ ಮೇಲಿದೆ. ಆತ ಸುರಕ್ಷಿತವಾಗಿ ಹಿಂತಿರುಗಲೆಂದು ಪ್ರಾರ್ಥಿಸುತ್ತೇನೆ. ಆತನನ್ನು ಚಿತ್ರಹಿಂಸೆಗೆ ಗುರಿಪಡಿಸುವುದಿಲ್ಲ ಎಂದು ನಂಬಿದ್ದೇನೆ. ಆತ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗಿಯೇ ಹಿಂತಿರುಗಿ ಬರುತ್ತಾನೆ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇಂತಹ ಅತೀವ ಸಂಕಷ್ಟದ ಸಮಯದಲ್ಲಿ ನೀವೆಲ್ಲ ನಮ್ಮೊಂದಿಗಿರುವುದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಮತ್ತು ನೀವು ನೀಡುತ್ತಿರುವ ಶಕ್ತಿಯಿಂದಲೇ ನಾವೆಲ್ಲ ಇನ್ನಷ್ಟು ದೃಢಚಿತ್ತರಾಗಿದ್ದೇವೆ. ದೇವರ ದಯೆಯಿಂದ ಆತ ವಾಪಸ್ ಬಂದೇ ಬರುತ್ತಾನೆ ಎಂದು ವರ್ಧಮಾನ್ ಅವರು ಭಾವುಕರಾಗುತ್ತಾರೆ.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಮಂಗಳವಾರ ಪಾಕಿಸ್ತಾನದಲ್ಲಿನ ಉಗ್ರನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಸೇನೆ ಬುಧವಾರ ಭಾರತದ ಮೇಲೆ ಪ್ರತಿದಾಳಿ ನಡಿಸಿದೆ. ಅದರಂತೆ ಪಾಕ್ ನ ವಿಮಾನಗಳನ್ನು ಹಿಮ್ಮೆಟ್ಟಿಸುವಾಗ ಅಭಿನಂದನ್ ಅವರ ಚಲಾಯಿಸುತ್ತಿದ್ದ ಮಿಗ್ 21 ಯುದ್ಧ ವಿಮಾನ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಿದ್ದರು.

ಈ ವೇಳೆ ಪಾಕ್ ಸೇನೆ ಮಿಗ್ 21 ಯುದ್ಧ ವಿಮಾನವನ್ನು ಹೊಡೆದುರುಳಿಸಿದರೂ ಪ್ಯಾರಾಶೂಟ್ ಸಹಾಯದಿಂದ ಅಭಿನಂದನ್ ಪಾರಾಗಿದ್ದರು. ಆದರೆ ಕಾಶ್ಮೀರದ ಜನರು ಮತ್ತು ಪಾಕಿಸ್ತಾನದ ಸೈನಿಕರಿಗೆ ಸಿಕ್ಕಿಬಿದ್ದರು. ಇದೀಗ, ಪಾಕ್ ಸೇನೆ ಅವರನ್ನು ವಿಚಾರಣೆಗೆ ಗುರಿಪಡಿಸಿದೆ. ವಿಚಾರಣೆಯ ಸಂದರ್ಭದಲ್ಲಿ, ತಮಗೇನೂ ಆಗಿಲ್ಲ, ನನ್ನನ್ನು ಉತ್ತಮವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿರುವ ವಿಡಿಯೋವನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.

ಅಭಿನಂದನ್ ಅವರು ಪಾಕಿಸ್ತಾನದ ಸೇನೆಯ ವಶದಲ್ಲಿರುವುದು ಖಚಿತವಾಗುತ್ತಿದ್ದಂತೆ ಭಾರತೀಯ ವಿದೇಶಾಂಗ ಸಚಿವಾಲಯ, ಪಾಕಿಸ್ತಾನವನ್ನು ಸಂಪರ್ಕಿಸಿ ಅಭಿನಂದನ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೋರಿದೆ. ನಾವು ಆಕ್ರಮಣ ಮಾಡಿದ್ದು ಭಯೋತ್ಪಾದಕ ನೆಲೆಗಳ ಮೇಲೆ ಆದರೆ ನೀವು ಭಾರತದ ಸೈನಿಕರ ಮೇಲೆಯೇ ಆಕ್ರಮಣ ಮಾಡುತ್ತಿದ್ದೀರಿ. ಇದು ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಅಭಿನಂದನ್ ಅವರನ್ನು ಪಾಕ್ ನಿಂದ ಬಿಡಿಸಿಕೊಂಡು ಭಾರತಕ್ಕೆ ಕರೆತರಬೇಕೆಂದು ಅಭಿಯಾನ ಶುರುವಾಗಿದೆ. #GiveBackAbhinanda ಮತ್ತು #BringBackAbhinandan ಎಂಬೆರಡು ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಗಳು ಟ್ರೆಂಡ್ ಆಗುತ್ತಿವೆ. ಅಭಿನಂದನ್ ಅವರನ್ನು ವಾಪಸ್ ಕಳಿಸಿಕೊಡಿ ಎಂಬು ಪಾಕಿಸ್ತಾನ ಸರ್ಕಾರವನ್ನು ಭಾರತೀಯ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಜೊತೆಗೆ, ಕೆಲ ಪಾಕಿಸ್ತಾನಿಯರು ಕೂಡ ಅಭಿನಂದನ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ನಮ್ಮ ಯುದ್ಧ ನೀತಿಯನ್ನು ಕೈಬಿಟ್ಟು, ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ಅಭಿನಂದನ್ ಅವರನ್ನು ವಾಪಸ್ ಕರೆದುಕೊಂಡು ಬಂದರೆ, ನಿಮ್ಮ ಗೌರವ ಇನ್ನೂ ಹೆಚ್ಚುತ್ತದೆ ಎಂದು ಸಾರ್ವಜನಿಕರು ಮೋದಿಯರವರಲ್ಲಿ ಮನವಿ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: