ಕರ್ನಾಟಕಪ್ರಮುಖ ಸುದ್ದಿ

ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಡಿ.ಸಿ ಶುಭ ಹಾರೈಕೆ

ಹಾಸನ (ಫೆ.28): ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು ಮಾರ್ಚ್ 1 ರಿಂದ ಪ್ರಾಂಭವಾಗಲಿದ್ದು ವಿದ್ಯಾರ್ಥಿಗಳು ಯಾವುದೇ ಒತ್ತಡಗಳಿಗೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಕರೆ ನೀಡಿದ್ದಾರೆ.

ದ್ವಿತೀಯ ಪಿ.ಯುಸಿ ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿರುವ ಜಿಲ್ಲಾಧಿಕಾರಿ ನಿರ್ಭಯವಾಗಿ ಪರೀಕ್ಷೆ ಎದುರಿಸಬೇಕು ಅವರಿಗೆ ಅಗತ್ಯವಿರುವ ಪೂರಕ ಮೂಲಭೂತ ಸೌಕರ್ಯಗಳನ್ನು ಜಿಲ್ಲಾಡಳಿತ ಮಾಡಲಿದೆ ಎಂದು ಜಿಲ್ಲಾಧಿಕಾರಿಗಳು ಬುಧವಾರ ತಿಳಿಸಿದರು.

ಈಗಾಗಲೇ ಪ್ರಶ್ನೆ ಪ್ರತಿಕೆಗಳು ಆಗಮಿಸಿದ್ದು ಅವುಗಳನ್ನು ಸುರಕ್ಷಿತವಾಗಿ ಜಿಲ್ಲಾ ಖಜಾನೆಯಲ್ಲಿ ಇರಿಸಲಾಗಿದೆ. ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಲು ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಎಲ್ಲಾ ಪರೀಕ್ಷೆ ಕೇಂದ್ರಗಳ ಸುತ್ತ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿವಿಗಳನ್ನು ಸಹ ಆಳವಡಿಸಲಾಗಿದೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯಾವುದೇ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಪ್ರಶ್ನೆ ಪತ್ರಿಕೆ ಪಾಲಕರ ಸಮಿತಿ ರಚನೆ:
ಎತ್ತಿನ ಹೊಳೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಗಿರೀಶ್ ನಂದನ್ ಎಂ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಾಮರಾಜು ಮತ್ತು ಜಿಲ್ಲಾ ಖಜಾನೆ ಉಪನಿರ್ದೇಶಕರಾದ ಎಸ್.ಆರ್. ವೇಣುಗೋಪಾಲ್ ಅವರುಗಳನ್ನೊಳಗೊಂಡ ಜಿಲ್ಲಾ ಮಟ್ಟದ ಪ್ರಶ್ನೆ ಪತ್ರಿಕೆ ಪಾಲಕರ ಸಮಿತಿಯನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 30 ಪರೀಕ್ಷಾ ಕೇಂದ್ರಗಳಿದ್ದು ಹಾಸನ-11, ಆಲೂರು 1, ಅರಸೀಕೆರೆ-6, ಅರಕಲಗೂಡು-3, ಬೇಲೂರು-2, ಚನ್ನರಾಯಪಟ್ಟಣ-4, ಹೊಳೆನರಸೀಪುರ-2 ಮತ್ತು ಸಕಲೇಶಪುರ 01.

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾಚ್ 01 ರಿಂದ ಮಾರ್ಚ್ 18 ರವರೆಗೆ ನಡೆಯಲಿದ್ದು, ಪರೀಕ್ಷೆಗಳು ಬೆಳಿಗ್ಗೆ 10:15 ರಿಂದ ಮದ್ಯಾಹ್ನ 1.30 ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ರ್ಯಾಂಡಮೈಸೇಶನ್ ಮಾಡಲಾಗಿದೆ. ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಗುರುತಿನ ಚೀಟಿ ಧರಿಸುವುದು. ಕಡ್ಡಾಯವಾಗಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಫ್ರೆಶ್ ವಿದ್ಯಾರ್ಥಿಗಳು-14186, ಪುನರಾವರ್ತಿತ ವಿದ್ಯಾರ್ಥಿಗಳು-1634 ಮತ್ತು ಖಾಸಗಿ ಅಭ್ಯರ್ಥಿಗಳು-647, ಒಟ್ಟು: 16467 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು. ಬಾಲಕರು-7368, ಬಾಲಕಿಯರು 9099 ಒಟ್ಟು 16467 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕಲಾ ವಿಭಾಗ-4989, ವಾಣಿಜ್ಯ ವಿಭಾಗ 6561, ವಿಜ್ಞಾನ ವಿಭಾಗ 4917 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಹಾಸನ ತಾಲ್ಲೂಕಿನಲ್ಲಿ -6023 ವಿದ್ಯಾರ್ಥಿಗಳು, ಆಲೂರು -468, ಬೇಲೂರು-1180, ಅರಸೀಕೆರೆ-2364, ಅರಕಲಗೂಡು-1906, ಹೊಳೆನರಸೀಪುರ-1550, ಚನ್ನರಾಯಪಟ್ಟಣ-2470 ಮತ್ತು ಸಕಲೇಶಪುರ-506 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

11 ಜಾಗೃತದಳದ ತಂಡ ಮತ್ತು ಉಪನಿರ್ದೇಶಕರ ನೇತೃತ್ವದಲ್ಲಿ ಒಂದು ಜಿಲ್ಲಾ ಜಾಗೃತ ದಳದ ತಂಡಗಳು ಕಾರ್ಯ ನಿರ್ವಹಿಸಲಿವೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್, ಸೈಂಟಿಫಿಕ್ ಕ್ಯಾಲುಕಲೇಟರ್, ರಿಷ್ಟ ವಾಚ್ ಮತ್ತು ಇತರೆ ವಿದ್ಯುನ್ಮಾನ ಸಲಕರಣೆಗಳನ್ನು ನಿಷೇಧಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಬ್ಬರು ಉಪನ್ಯಾಸಕರನ್ನು ನೇಮಿಸಲಾಗಿದೆ ವಿದ್ಯಾರ್ಥಿಗಳು ತಮ್ಮ ನೊಂದಣಿ ಸಂಖ್ಯೆ, ಕೊಠಡಿ ಸಂಖ್ಯೆ ಇತ್ಯಾದಿಗಳ ಬಗ್ಗೆ ಗೊಂದಲ ಪರಿಹರಿಸಿಕೊಳ್ಳಲು ನೆರವಾಗುವುದು.

ಉಚಿತ ಬಸ್ ವ್ಯವಸ್ಥೆ:
ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‍ಗಳ ಸಂಚಾರಕ್ಕೆ ನಿರ್ದೇಶನ ನಿಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: