ಮೈಸೂರು

ಧರ್ಮಗಂಥ ಓದಿದವರು ಧರ್ಮದ ಕುರಿತು ಲಘುವಾಗಿ ಮಾತನಾಡುವುದಿಲ್ಲ : ಮೊಹಮ್ಮದ್ ಕುಂಞಿ

ಧರ್ಮ ಎಲ್ಲರಿಗೂ ಒಂದೇ. ಧರ್ಮಗ್ರಂಥಗಳನ್ನು ಸರಿಯಾಗಿ ಓದಿದವರು ಧಾರ್ಮಿಕ ವಿಚಾರಗಳ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಬೊಳುವಾರು ಮಹಮದ್ ಕುಂಞಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಬ್ಯಾರಿ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಶನಿವಾರ ಮೈಸೂರಿನ ಇನ್ಸಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ-ಮುಸ್ಲಿಮರಿಗೆ ಎರಡು ಧರ್ಮ ಎಂಬುದು ಇದೆಯೇ? ಧರ್ಮ ಎಲ್ಲರಿಗೂ ಒಂದೇ. ಸರಿಯಾಗಿ ಓದಿದವರು ಧರ್ಮದ ಬಗ್ಗೆ ಮಾತನಾಡದೆ ಸುಮ್ಮನಿರುತ್ತಾರೆ. ಭಗವದ್ಗೀತೆಯಲ್ಲಿ ಅಲ್ಪಪ್ರಾಣ, ಮಹಾಪ್ರಾಣ ಬಳಕೆಯಾಗುತ್ತದೆಯೇ ಎನ್ನುವ ಕುರಿತು ಅರಿವಿಲ್ಲದವರು ಭಗವದ್ಗೀತೆಯ ಚರ್ಚೆಯಲ್ಲಿ ಭಾಗಿಯಾಗುತ್ತಾರೆ. ಇದರ ಹಿಂದೆ ಪ್ರಚಾರ ಪಡೆಯುವ ಉದ್ದೇಶವಿರುತ್ತದೆ ಎಂದು ಹೇಳಿದರು.

ಸೀತೆಯ ಕುರಿತು ಕಾದಂಬರಿ ಬರೆಯುವುದು ಈ ದೇಶದಲ್ಲಿ ಸುಲಭ. ಆದರೆ ಈಗ ನಾನು ಪ್ರವಾದಿ ಮಹಮದ್ ರ ಮೂರನೇ ಹೆಂಡತಿ ಆಯಿಷಾ ಅವರ ಕುರಿತಾಗಿ ಕಾದಂಬರಿ ಬರೆಯುತ್ತಿದ್ದೇನೆ. ಆದರೆ ಆಯಿಷಾ ಬಗ್ಗೆ ಬರೆದರೆ ನನಗೆ ಏನಾಗುತ್ತದೋ ಎಂಬ ಭಯ ಅನೇಕರಿಗಿದೆ. ಪ್ರವಾದಿ ಎಂದ ಕೂಡಲೇ ಮಹಮದ್ ಎಂದು ಹೇಳಬೇಕಾಗುತ್ತದೆ. ಆದರೆ ಈ ರೀತಿ ಹೇಳಬೇಕು ಎಂದು ಪ್ರವಾದಿಗಳು ಎಂದೂ ಹೇಳಿಲ್ಲ ಎಂದರು.

ಇಂದು ಮಹಿಳೆಯರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಮುಖ್ಯವಾಗಿ ಇಂದಿನ ಯುವಜನತೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿ ತೋರಿಸಬೇಕಿದೆ ಎಂದು ಹೇಳಿದರು.

ಉಡುಪಿಯ ಪೇಜಾವರ ಶ್ರೀಗಳು ಎಲ್ಲರನ್ನೂ ಪ್ರೀತಿಸುತ್ತಾರೆ. ಅವರಿಂದ ಪ್ರಪಂಚವನ್ನು ಬದಲಾಯಿಸಲು ಸಾಧ್ಯವೇ, ಇದು ಅಸಾಧ‍್ಯ. ಆದರೆ ಮಾಧ‍್ಯಮಗಳು ನಡೆದಂತಹ ಘಟನೆಗಳಿಗೆ ಅವರ ಬಳಿ  ಪ್ರತಿಕ್ರಿಯೆ ಕೇಳಿ ತೊಂದರೆ ಉಂಟುಮಾಡುತ್ತಿವೆ ಎಂದರು.

ಕುವೆಂಪು ಅವರಿಗಿಂತ ಹೆಚ್ಚು ಪುಟದ ಕಾದಂಬರಿ ಬರೆಯುವ ಆಸೆ ನನಗಿದೆ. ಕಾರಂತರಿಗಿಂತ ಹೆಚ್ಚು ಕಾಲ ಬದುಕಬೇಕು. ‘ಸ್ವಾತಂತ್ರ್ಯದ ಓಟ’ ಕಾದಂಬರಿಯ ಮೂಲಕ ಕುವೆಂಪು ಅವರಿಗಿಂತ ಹೆಚ್ಚು ಅಂದರೆ 1,100 ಪುಟಗಳ ಕಾದಂಬರಿ ಬರೆದಿದ್ದೇನೆ. 600 ಪುಟ ಆಗುವ ವೇಳೆಗೆ ಕಾದಂಬರಿಯಲ್ಲಿ ಬರುವ 300 ಪಾತ್ರಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ 1,100 ಪುಟಗಳನ್ನು ಬರೆಯಬೇಕಾಯಿತು. ಕನ್ನಡ ಸಾಹಿತ್ಯದಲ್ಲಿ ಹೆಚ್ಚಿನ ಅಂದರೆ 750 ರೂ. ಮುಖಬೆಲೆಯ ಕಾದಂಬರಿ ಇದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಬಿ.ಎಂ. ಹನೀಫ್, ವಿಶ್ರಾಂತ ಪ್ರಾಧ‍್ಯಾಪಕ ಡಾ.ಹೆಚ್. ಎಂ. ಕುಮಾರಸ್ವಾಮಿ, ಜಿಲ್ಲಾ ಕಸಾಪ  ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಬ್ಯಾರಿ ವೆಲ್ ಫೇರ್ ಅಸೋಸಿಯೇಷನ್ ಅಧ‍್ಯಕ್ಷ ಎನ್.ಮೊಹಮದ್ ಹಾಜಿ ಉಪಸ್ಥಿತರಿದ್ದರು.

Leave a Reply

comments

Related Articles

error: