ಕರ್ನಾಟಕಪ್ರಮುಖ ಸುದ್ದಿ

ಸುಧಾಮೂರ್ತಿ ಹೆಸರಲ್ಲಿ ವಿಜಯ್ ದೇವರಕೊಂಡಗೆ ನಕಲಿ ಪತ್ರ!

ಬೆಂಗಳೂರು (ಫೆ.1): ಇಸ್ಫೋಸಿಸ್‌ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್‌ಹೆಡ್‌ ಸೃಷ್ಟಿಸಿ, ಹೊಸ ಮೊಬೈಲ್‌ ಅಪ್ಲಿಕೇಷನ್‌ನ ರಾಯಭಾರಿಯಾಗುವಂತೆ ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ ದೇವರಕೊಂಡ ಅವರಿಗೆ ಪತ್ರ ಬರೆಯಲಾಗಿದೆ!

ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಇಸ್ಫೋಸಿಸ್‌ ಫೌಂಡೇಶ್‌ನಲ್ಲಿ ಕೆಲಸ ನಿರ್ವಹಿಸುವ ನಿವೃತ್ತ ಸೇನಾಧಿಕಾರಿ ಎಂ.ರಮೇಶ್‌ ಎಂಬುವವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸುಧಾಮೂರ್ತಿ ಅವರ ಸಹಿಯನ್ನು ನಕಲು ಮಾಡಿ ನಕಲಿ ಲೆಟರ್‌ಹೆಡ್‌ ನಲ್ಲಿ ಬರೆಯಲಾದ ಪತ್ರವನ್ನು ತೆಲುಗು ನಟ ವಿಜಯ್‌ ದೇವರಕೊಂಡ ಅವರ ವಿಳಾಸಕ್ಕೆ ಕಳುಹಿಸಿದ್ದಾನೆ. ಈ ನಕಲಿ ಲೆಟರ್‌ಹೆಡ್‌ನಲ್ಲಿ ಸುಧಾಮೂರ್ತಿ ಅವರ ಪ್ರಾಯೋಜಕತ್ವದಲ್ಲಿ ಆಫರ್ಸ್‌ ನಿಯರ್‌ ಬೈ ಎಂಬ ಮೊಬೈಲ್‌ ಅಪ್ಲಿಕೇಷನ್‌ ನಿರ್ಮಿಸಿರುವುದಾಗಿ ಸುಳ್ಳು ವಿವರವನ್ನು ಆರೋಪಿ ನೀಡಿದ್ದ. ಜತೆಗೆ, ರಾಯಭಾರಿ ಆಗುವಂತೆ ಚಿತ್ರನಟನನ್ನು ಕೋರಿ ಸ್ಪೀಡ್‌ ಪೋಸ್ಟ್‌ ಮಾಡಿದ್ದ.

ಆದರೆ ವಿಳಾಸ ತಪ್ಪಾದ ಕಾರಣ ವಿಜಯ ದೇವರಕೊಂಡ ಅವರಿಗೆ ತಲುಪದೇ ಅದು ನೇರವಾಗಿ ಇಸ್ಫೋಸಿಸ್‌ ಫೌಂಡೇಶನ್‌ ಕಚೇರಿಗೆ ವಾಪಸ್‌ ಬಂದಿದೆ. ಇದರಿಂದ ಅಚ್ಚರಿಗೊಂಡ ಕಚೇರಿ ಸಿಬ್ಬಂದಿ ಕೂಡಲೇ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು. (ಎನ್.ಬಿ)

Leave a Reply

comments

Related Articles

error: