ದೇಶವಿದೇಶ

ಯಡಿಯೂರಪ್ಪ ಹೇಳಿಕೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಮುಜುಗರ

ಬಿಎಸ್‍ವೈ ಹೇಳಿಕೆ ಉಲ್ಲೇಖಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷದಿಂದ ಟ್ವೀಟ್! ತಕ್ಷಣ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ವಿ.ಕೆ.ಸಿಂಗ್‍

ಬೆಂಗಳೂರು/ಇಸ್ಲಾಮಾಬಾದ್/ನವದೆಹಲಿ (ಮಾ.1): ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂಬ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆಗೆ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ.

ಯಡಿಯೂರಪ್ಪ ಅವರು ಬುಧವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ’ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ -ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್‌ ಪಕ್ಷವು, ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ’22 ಸೀಟ್ ಗೆಲ್ಲೋ ಸಲುವಾಗಿ ಇಷ್ಟು ಪ್ರಾಣಗಳ ಜೊತೆ ಬಿಜೆಪಿ ಚೆಲ್ಲಾಟ ಆಡ್ತಿದೆ. ಯುದ್ಧ ಅನ್ನೋದು ಚುನಾವಣೆಯ ಆಯ್ಕೆನಾ’ ಎಂದು ಪ್ರಶ್ನಿಸಿದೆ. ಅಲ್ಲದೇ ಪಾಕಿಸ್ತಾನದ ಚಾನೆಲ್‍ಗಳಲ್ಲಿ ಕೂಡ ಈ ಕುರಿತು ಡಿಬೇಟ್ ಆಗಿದೆ.

ಇದು ಬಿಜೆಪಿ ನಾಯಕರಿಗೆ ತೀವ್ರ ಮುಜುಗರವನ್ನುಂಟುಮಾಡಿದ್ದು, ಈ ಕೂಡಲೇ ಕೇಂದ್ರ ಸಚಿವ ವಿಕೆ ಸಿಂಗ್, ಬಿಎಸ್‍ವೈಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಾಗೆಯೇ ‘ಬಿಎಸ್‍ವೈ ಹೇಳಿಕೆಯಿಂದ ಭಿನ್ನವಾಗಿರಲು ಬಯಸುತ್ತೇನೆ. ಕೇವಲ ಹೆಚ್ಚುವರಿ ಸೀಟ್ ಗೆಲ್ಲಲು ಇಷ್ಟೆಲ್ಲ ಮಾಡ್ತಿಲ್ಲ. ಇದು ದೇಶವನ್ನು ಕಾಪಾಡಿಕೊಳ್ಳುವ ಕ್ರಮ’ ಎಂದು ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: