ಮೈಸೂರು

ಶಿವರಾತ್ರಿ ಹಬ್ಬದ ಹಿನ್ನೆಲೆ ಶಾಂತಿ ಭಂಗ ತರುವ ಕೃತ್ಯಗಳಲ್ಲಿ ತೊಡಗಿದರೆ ಕಠಿಣ ಕ್ರಮ : ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಸೂಚನೆ

ಮೈಸೂರು,ಮಾ.1:-  04-03-2019  ರಂದು ಮೈಸೂರು ನಗರದಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ಸಾರ್ವಜನಿಕರು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ  ಸಮಯದಲ್ಲಿ ಕೆಲವು ಯುವಕರು ಅನಾವಶ್ಯಕವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ತಿರುಗಾಡುತ್ತಾ, ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಾ, ಹೆಂಗಸರು, ಮಕ್ಕಳು, ವೃದ್ಧರನ್ನು ಕೀಟಲೆ ಮಾಡುತ್ತಾ, ಸಾರ್ವಜನಿಕರ ಶಾಂತಿಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವವರಿದ್ದಾರೆ. ಅಂತಹುದೇನಾದರೂ ನಗರದಲ್ಲಿ ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು ರಾತ್ರಿ ಜಾಗರಣೆಯ ಸಮಯದಲ್ಲಿ ಮನೆಗಳ ಮುಂದೆ ಇರುವ ಹೂ ಕುಂಡಗಳನ್ನು ಒಡೆದು ಹಾಕುವುದು, ಗಿಡಗಳಿಂದ ಹೂಗಳನ್ನು ಕೀಳುವುದು,  ಮರಗಳಿಂದ ಹಣ್ಣು, ಎಳನೀರನ್ನು ಕೀಳುವುದು, ಅಂಗಡಿಗಳ ಬೋರ್ಡ್‍ಗಳನ್ನು ಬದಲಾವಣೆ ಮಾಡುವುದು, ಪಾನಮತ್ತರಾಗಿ ವಾಹನಗಳನ್ನು ಜೋರಾಗಿ ಓಡಿಸಿ ಪಾದಚಾರಿಗಳಿಗೆ ಭಯವನ್ನುಂಟು ಮಾಡುವುದು,  ರಸ್ತೆ ಮಧ್ಯೆ ಕಲ್ಲುಗಳನ್ನು ಇಡುವುದು, ಖಾಲಿ ಬಾಟಲ್‍ಗಳನ್ನು  ರಸ್ತೆಯ ಮಧ್ಯೆ ಒಡೆದು ಹಾಕಿ  ಸಂಚಾರ ವ್ಯತ್ಯಯ ಉಂಟು ಮಾಡುವುದು,  ಮುಂತಾದ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವ ಕಾರ್ಯಗಳನ್ನು ಮಾಡುವವರಿದ್ದಾರೆ.  ರಸ್ತೆ ಮಧ್ಯೆ ವೀಡಿಯೊ ಚಲನಚಿತ್ರಗಳನ್ನು ಹಾಕುವುದು, ಅನುಮತಿ ಇಲ್ಲದೇ ಹಾಗೂ ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕಗಳನ್ನು ಹಾಕುವುದು, ದೇವಸ್ಥಾನಗಳಲ್ಲಿ ದೇವ ದರ್ಶನಕ್ಕೆ ಕ್ಯೂ ನಿಲ್ಲದೇ  ನುಗ್ಗಲು ಪ್ರಯತ್ನಿಸುವುದು ಮಾಡುತ್ತಾರೆ. ಈ ರೀತಿ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗುವುದು ಮತ್ತು  ನಗರದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ  ಕೃತ್ಯಗಳಲ್ಲಿ  ತೊಡಗುವವರ ವಿರುದ್ಧ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ಮಹಾ ಶಿವರಾತ್ರಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಮತ್ತು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು   ಕಾನೂನು ಬಾಹಿರ ಕೃತ್ಯಗಳು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಅಥವಾ  ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ.100, 2418139, 2418339 ಗೆ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: