ದೇಶಪ್ರಮುಖ ಸುದ್ದಿ

ಆಧ್ಯಾದೇಶದ ಮೂಲಕ ಆಧಾರ್ ತಿದ್ದುಪಡಿ: ಕೇಂದ್ರದ ಕ್ರಮದಿಂದ ಏನು ಪರಿಣಾಮ?

ಹೊಸದಿಲ್ಲಿ (ಮಾ.1): ಬ್ಯಾಂಕ್ ಖಾತೆ ತೆರೆಯಲು ಹಾಗೂ ಮೊಬೈಲ್ ಫೋನ್ ಸಂಪರ್ಕ ಪಡೆಯಲು ಗುರುತು ಪತ್ರವಾಗಿ ಆಧಾರ್ ಬಳಕೆಯನ್ನು ಸ್ವಯಂಪ್ರೇರಿತವನ್ನಾಗಿಸಲು ಅವಕಾಶ ನೀಡುವ ಆಧ್ಯಾದೇಶಕ್ಕೆ ಗುರುವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಆಧಾರ್ ತಿದ್ದುಪಡಿ ಮಸೂದೆ ಜ.4 ರಂದು ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಬಾಕಿ ಇತ್ತು. ಈಗಿನ ಲೋಕಸಭೆ ಅವಧಿ ಮುಗಿಯುವುದರೊಂದಿಗೆ ಮಸೂದೆ ಕೈತಪ್ಪುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆಧ್ಯಾದೇಶ ಹೊರಡಿಸುವುದು ಅಗತ್ಯವಾಗಿತ್ತು.

ಆಧ್ಯಾದೇಶದ ಹಿನ್ನೆಲೆಯಲ್ಲಿ ಆಧಾರ ಕಾಯ್ದೆಯಲ್ಲಿ ಹಲವು ಬದಲಾವಣೆಗಳು ಆಗಲಿದ್ದು, ಮಕ್ಕಳಿಗೆ 18 ವರ್ಷ ವಯಸ್ಸಾದಾಗ ಬಯೋಮೆಟ್ರಿಕ್ ಐಡಿ ಕಾರ್ಯಕ್ರಮದಿಂದ ಹೊರಹೋಗುವ ಅವಕಾಶವನ್ನು ಕಾಯ್ದೆಯಲ್ಲಿ ನೀಡಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಹಾಗೂ ಐಟಿ ಸಚಿವ ರವಿ ಶಂಕರ್ ಪ್ರಸಾದ್, ಆಧಾರ್ ಹಾಗೂ ಇತರ ಕಾನೂನು(ತಿದ್ದುಪಡಿ)ಮಸೂದೆಗಳ ಮೇಲೆ ಪರಿಣಾಮಬೀರುವ ಆಧ್ಯಾದೇಶದ ಘೋಷಣೆಗೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ತಿದ್ದುಪಡಿಯಿಂದಾಗಿ ಆಧಾರ್ ಬಳಕೆಯಲ್ಲಿ ನಿಯಮವನ್ನು ಉಲ್ಲಂಘಿಸಿದರೆ, ಖಾಸಗೀತನವನ್ನು ಉಲ್ಲಂಘಿಸಿದ ಕಠಿಣ ದಂಡ ವಿಧಿಸಲಾಗುತ್ತದೆ. ಟೆಲಿಗ್ರಾಫಿಕ್ ಕಾಯ್ದೆ ಹಾಗೂ ಪಿಎಂಎಲ್‌ಎ ನಿಯಮಗಳ ಪ್ರಕಾರ ಆಧಾರನ್ನು ಕೆವೈಸಿ ಆಗಿ ಸ್ವಯಂಪ್ರೇರಿತ ಆಧಾರದಲ್ಲಿ ಬಳಕೆ ಮಾಡಬಹುದು. ಆಧಾರ್ ಬಳಸುವ ಯಾವುದೇ ಸಂಸ್ಥೆ ಗೌಪ್ಯತೆ ಮಾರ್ಗದರ್ಶನ ಕಾಯ್ದುಕೊಳ್ಳಲು ಬದ್ಧವಾಗಿರಬೇಕು ಎಂದು ಪ್ರಸಾದ್ ತಿಳಿಸಿದರು.

ತಿದ್ದುಪಡಿ ಕಾನೂನಿನ ಪ್ರಕಾರ ಯಾರೇ ಆಗಲಿ ಆಧಾರನ್ನು ನೀಡದೆ ಇದ್ದರೆ ಅವರಿಗೆ ಯಾವುದೇ ಸೇವೆಯನ್ನು, ಬ್ಯಾಂಕ್ ಖಾತೆ ತೆರೆಯುವುದಕ್ಕೆ ಅಥವಾ ಮೊಬೈಲ್ ಫೋನ್ ಸಿಮ್ ಕಾರ್ಡ್ ಪಡೆಯುವುದಕ್ಕೆ ನಿರಾಕರಿಸುವುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. (ಎನ್.ಬಿ)

Leave a Reply

comments

Related Articles

error: