ಪ್ರಮುಖ ಸುದ್ದಿಮೈಸೂರು

ಧರ್ಮ ಜಾತಿ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಶಕ್ತಿಗಳಿಂದ ಸಮಾಜವನ್ನು ರಕ್ಷಿಸಬೇಕು : ಸಿಎಂ ಹೆಚ್.ಡಿ.ಕೆ.

ಸುತ್ತೂರು,ಮಾ.1 : ಧರ್ಮ, ಜಾತಿ ಹೆಸರಿನಲ್ಲಿ ದೇಶವನ್ನು ವಿಭಜರಿಸುವ ಶಕ್ತಿಗಳಿಂದ ಸಮಾಜವನ್ನು ರಕ್ಷಿಸುವುದು ಮತ್ತು ಸಂವಿಧಾನದ ಆಶಯಗಳನ್ನು ಈಡೇರಿಸುವುದು ಮಾಧ್ಯಮಗಳ ಮತ್ತು ಪತ್ರಕರ್ತರ ಇಂದಿನ ತುರ್ತು ಕಾರ್ಯವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಶಿಸಿದರು.

ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ (ಮಾ.1,2) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ

34ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಸುಳ್ಳುಗಳೆ ವಿಜೃಂಬಿಸುತ್ತಾ ಸತ್ಯವನ್ನು ಮರೆಮಾಚಲಾಗುತ್ತಿದೆ. ನಿಜವಾದ ಸುದ್ದಿ ಯಾವುದು ಎಂಬ ಗೊಂದಲವನ್ನೆ  ಜನರಲ್ಲಿ ಹುಟ್ಟು ಹಾಕುವ ಷಡ್ಯಂತ್ರಗಳು ನಡೆಯುತ್ತಿದೆ. ಸಾಂಪ್ರದಾಯಿಕ ಮಾಧ್ಯಮಗಳ ಜೊತೆಗೆ ಇಂದಿನ ನವ ಮಾಧ್ಯಮಗಳು ಜನರ ವಿಶ್ವಾಸಾರ್ಹತೆಯನ್ನೆ ನಾಶ ಮಾಡುವ ಸಂದರ್ಭಗಳು ಆತಂಕಕಾರಿಯಾಗಿವೆ.

 

ಪತ್ರಕರ್ತರು ನೇರವಂತಿಕೆ, ನಿಷ್ಠುರತೆ, ವಸ್ತುನಿಷ್ಠ ಹಾಗೂ ಸತ್ಯನಿಷ್ಠ ವರದಿಗಳನ್ನು ನೀಡುತ್ತಾ ಮಾಧ್ಯಮದ ಮೌಲ್ಯಗಳನ್ನು ಸದಾಕಾಲ ಎತ್ತಿ ಹಿಡಿಯಬೇಕಿದ್ದು ಸರ್ಕಾರದ ಆಡಳಿತ. ನೀತಿ- ನಿರೂಪಣೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪತ್ರಕರ್ತರು  ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಉತ್ತಮ ಆಡಳಿತ ನೀಡಲು ಪೂರ್ವಾಗ್ರಹವಿಲ್ಲದ ವಿಮರ್ಶೆ ಯೊಂದು ಆಡಳಿತದ   ದಾರಿಯನ್ನು ತೋರುತ್ತದೆ. ಅದನ್ನು ತಮ್ಮಿಂದ ನಿರೀಕ್ಷಿಸುತ್ತೇನೆ.

ಮೊದಲಿಂದಲೂ ಮಾಧ್ಯಮಕ್ಷೇತ್ರ ನಂಟು ಮತ್ತು ಅದರ ನಿರ್ವಹಣೆಯ ಜವಾಬ್ದಾರಿಯ ಸಂಪರ್ಕವೂ ಹೊಂದಿರುವುದರಿಂದ ಕೇವಲ ಸುದ್ದಿ ಸಂಸ್ಥೆಯ ನಿರ್ವಹಣೆಯಲ್ಲದೆ ಅಲ್ಲಿ ದುಡಿಯುವ ನಿಮ್ಮೆಲ್ಲರ ಬದುಕು, ಬವಣೆ, ಕಷ್ಟ-ಸುಖಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ.

ಮಾಧ್ಯಮ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ವಿದ್ಯುನ್ಮಾನ ಕ್ಷೇತ್ರವಂತೂ   ವಿಸ್ತಾರಗೊಳ್ಳುತ್ತಲೇ ಇದೆ. ಹಲವಾರು ಹೊಸ ಟಿ.ವಿ. ಚಾನಲ್‍ಗಳು ರಾಜ್ಯದಲ್ಲಿ  ಕಾರ್ಯಾರಂಭ ಮಾಡಿ, ವೀಕ್ಷಕರಿಗೆ ಸುದ್ದಿ ನೀಡಲು ಪೈಪೋಟಿಗಿಳಿದಿವೆ. ವೃತ್ತ ಪತ್ರಿಕೆಯೇ ಮಾಧ್ಯಮ ಎನ್ನುವ ದಿನಗಳಿಂದ ಅದೆಷ್ಟೋ ದೂರ ಸಾಗಿ ಬಂದಿದ್ದೇವೆ, ತಂತ್ರಜ್ಞಾನಕ್ಕೆ ಹೊರಳಿಕೊಂಡಿದ್ದೇವೆ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ಜನರಿಗೆ ಮಾಹಿತಿ ತಲುಪಿಸುವಂತಾಗಿದೆ.

ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಪೂರಕ ನೆರವು ನೀಡಲು ರಾಜ್ಯಸರ್ಕಾರ ಸದಾ ಸಿದ್ದವಿದೆ.  ಈಗಾಗಲೇ ಜಾರಿಯಲ್ಲಿರುವ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು,ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಹೆಚ್ಚಿನ ಜಾಹೀರಾತು ನೀಡುವ ಶೇ.20ರಷ್ಟು ದರ ಏರಿಕೆ, ವಾರ್ತಾ ಇಲಾಖೆಗಳಲ್ಲಿ ಗ್ರಂಥಾಲಯ ಸ್ಥಾಪನೆ, ಟೋಲ್ ಗೇಟ್ ಶುಲ್ಕ ವಿನಾಯ್ತಿ, ಆರೋಗ್ಯ ನಿಧಿಗೆ 2 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಮೀಸಲಿರಿಸುವುದಾಗಿ ಆಶ್ವಾಸನೆ ನೀಡಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ, ನಾಡೋಜ ಪಾಟೀಲ್ ಪುಟ್ಟಪ್ಪ, ಸಚಿವ ಸಾ.ರಾ.ಮಹೇಶ್, ಶಾಸಕರಾದ ಹೆಚ್.ವಿಶ್ವನಾಥ್, ಹರ್ಷವರ್ದನ್, ಸುತ್ತೂರಿನ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಂಘದ ಪದಾಧಿಕಾರಿಗಳು ಇನ್ನಿತರರ ಗಣ್ಯರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: