ಪ್ರಮುಖ ಸುದ್ದಿಮೈಸೂರು

ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತಾ ಕ್ರಮ ಕೈಗೊಳ್ಳಲು ಸೂಚನೆ

ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವ ವ್ಯವಸ್ಥಿತವಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಸಿದ್ಧತಾ ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ತಿಳಿಸಿದರು.
ಮೈಸೂರಿನ ತಮ್ಮ ಗೃಹ ಕಚೇರಿಯಲ್ಲಿ ಜಾತ್ರಾ ಮಹೋತ್ಸವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮುಖ ಯಾತ್ರಾ ಸ್ಥಳವಾದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಕಾವೇರಿ ನದಿಯ ತೀರದಲ್ಲಿ ಎರಡು ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸೋಪನಕಟ್ಟೆ ನಿರ್ಮಾಣ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರಾ ಮಹೋತ್ಸವವು ಜನವರಿ 30 ರಿಂದ ಫೆಬ್ರವರಿ 15 ರವರೆಗೆ ನಡೆಯಲಿದೆ. ಫೆಬ್ರವರಿ 6 ರಂದು ರಥೋತ್ಸವ, ಫೆಬ್ರವರಿ 9 ರಂದು ತೆಪ್ಪೋತ್ಸವ, ಸೇರಿದಂತೆ ಅನೇಕ ಉತ್ಸವಗಳನ್ನು ಈ ಅವಧಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
 ಜನವರಿ 30 ನಂತರ ಜಾನುವಾರುಗಳನ್ನು ಕರೆತರಲು ಮನವಿ: ಜಾತ್ರೆಯ ಮುಖ್ಯ ಆಕರ್ಷಣೆಗಳಲ್ಲೊಂದಾದ ಜಾನುವಾರುಗಳ ಜಾತ್ರೆಯಲ್ಲಿ  ಮೈಸೂರು ಜಿಲ್ಲೆ ಸೇರಿದಂತೆ ಮಂಡ್ಯ, ಚಾಮರಾಜನಗರ ಹಾಗೂ ವಿವಿಧ ಜಿಲ್ಲೆಗಳಿಂದ  ಜಾನುವಾರುಗಳು ಬರಲಿದ್ದು, ಜನವರಿ 30 ರ ನಂತರ ದನಗಳನ್ನು ಜಾತ್ರೆಗೆ ಕರೆತರುವುದು ಸೂಕ್ತ. ಉತ್ತಮ ಜಾನುವಾರು ಪ್ರಶಸ್ತಿಗೆ ಫೆಬ್ರವರಿ 4 ರಂದು ಆಯ್ಕೆ ಪ್ರಕ್ರಿಯೆ ಹಾಗೂ ಫೆಬ್ರವರಿ 5 ರಂದು ಬಹುಮಾನ ವಿತರಣಾ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಿಸಿ ಟಿವಿ ಅಳವಡಿಕೆ: ಲಕ್ಷಾಂತರ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೆ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಪೊಲೀಸ್ ಇಲಾಖೆಯವರು ಕೈಗೊಳ್ಳುವುದರ ಜೊತೆಗೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ಸಚಿವರು ತಿಳಿಸಿದರು.
ಜಾತ್ರೆಯ ಭದ್ರತೆ ಹಾಗೂ ವಾಹನ ಸಂಚಾರ ಮತ್ತು ಪಾರ್ಕಿಂಗ್ ಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕ್ರಮವಹಿಸಬೇಕು. ಭಕ್ತಾದಿಗಳು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಜಾತ್ರಾ ಸ್ಥಳದಲ್ಲಿ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಮಳಿಗೆಯನ್ನು  ತೆರೆದು ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗಳನ್ನು ನೇಮಿಸಬೇಕು. ಜಾತ್ರೆಯ ಸ್ವಚ್ಛತಾ ಕಾರ್ಯದ ಸಂಪೂರ್ಣ ಉಸ್ತುವಾರಿ ಜವಾಬ್ದಾರಿಯನ್ನು ಅಧಿಕಾರಿಗಳು ನೋಡಿಕೊಳ್ಳಬೇಕು. ಕುಡಿಯುವ ನೀರಿನ ತೊಂಬೆಯ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಜವಾಬ್ದಾರಿಯನ್ನು ತಾಲೂಕು ಪಂಚಾಯತ್ ಹಾಗೂ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಸಮೂಹ ದೇವಾಲಯಗಳ ಆಡಳಿತ ಮಂಡಳಿ ವಹಿಸಲಿದೆ ಎಂದು ತಿಳಿಸಿದರು.
ವಿದ್ಯುತ್ ಸರಬರಾಜು ಇಲಾಖೆಯು ಜಾತ್ರೆ ನಡೆಯುವ ದಿನಗಳಂದು ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಯಾವುದೇ ಅವಘಡವಾಗದಂತೆ ಎಚ್ಚರ ವಹಿಸಲು ಸಿಬ್ಬಂದಿಗಳನ್ನು ಜಾತ್ರಾ ಸ್ಥಳದಲ್ಲಿ ನಿಯೋಜಿಸಬೇಕು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಭಕ್ತಾದಿಗಳಿಗೆ ತಾತ್ಕಾಲಿಕ ಶೌಚಾಲಯ ಹಾಗೂ ಉಡುಗೆ ಬದಲಾಯಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.
ಜಾತ್ರೆ ಸಮಯದಲ್ಲಿ ಹೆಚ್ಚಿನ ಜನ ಸೇರುವುದರಿಂದ ವಸ್ತು ಪ್ರದರ್ಶನಕ್ಕೆ ಅವಕಾಶವಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಶಿಕ್ಷಣ ಮೀನುಗಾರಿಕೆ ಹಾಗೂ ಇತರೆ ಇಲಾಖೆಗಳು ವಸ್ತು ಪ್ರದರ್ಶನ ಆಯೋಜಿಸಲು ಕ್ರಮಕೈಗೊಳ್ಳಬೇಕು.  ಜಾತ್ರೆಗೆ ಬರುವ ರಾಸುಗಳಿಗೆ ಪಶುಸಂಗೋಪನಾ ಇಲಾಖೆಯವರು ತಾತ್ಕಾಲಿಕ ಆಸ್ಪತ್ರೆ ತೆರೆದು  ರಾಸುಗಳ ಆರೋಗ್ಯ ತಪಾಸಣೆಗೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಬೇಕು. ರಾಸುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿ ಕಾಲು ಬಾಯಿ ಜ್ವರ ಸೇರಿದಂತೆ ಇನ್ನಿತರೆ ಸಾಂಕ್ರಮಿಕ ರೋಗ ಹರಡದಂತೆ  ತಡೆಯಲು ಮುಂಜಗ್ರತಾ ಕ್ರಮ ವಹಿಸುವಂತೆ ತಿಳಿಸಿದರು.

ಭಕ್ತಾದಿಗಳಿಗೆ ಹೊರೆಯಾಗದಂತೆ ಈ ಬಾರಿಯೂ ವಾಹನ ಶುಲ್ಕವನ್ನು ರದ್ದು ಪಡಿಸಲಾಗುವುದು. ಈ ಹಿಂದೆಯೇ ರಾಸುಗಳ ಶುಲ್ಕವನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಿದರು.ಶ್ರೀ ವೈದ್ಯನಾಥೇಶ್ವರಸ್ವಾಮಿ ಮತ್ತು ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಮೂರ್ತಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: