ದೇಶಪ್ರಮುಖ ಸುದ್ದಿ

ಭಾರತಕ್ಕೆ ಅಭಿನಂದನ್ ಹಸ್ತಾಂತರಿಸಿದ ಪಾಕ್: ವಾಘಾ ಗಡಿಯಲ್ಲಿ ಆತ್ಮೀಯ ಸ್ವಾಗತ

ನವದೆಹಲಿ (ಮಾ.1): ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ತನ್ನ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸುರಕ್ಷಿತವಾಗಿ ಇಂದು (ಶುಕ್ರವಾರ) ಸಂಜೆ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.

ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಕರೆತಂದಿದ್ದು, ಭಾರತೀಯ ಸೇನಾ ವರಿಷ್ಠರಿಗೆ, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು ಎಂದು ತಿಳಿದುಬಂದಿದೆ.

ಭದ್ರತೆಯ ದೃಷ್ಟಿಯ ಹಿನ್ನೆಲೆಯಲ್ಲಿ ವಾಯಸೇನೆ, ನೌಕಾಸೇನೆ ಹಾಗೂ ಭೂಸೇನಾ ಮುಖ್ಯಸ್ಥರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ. ಭದ್ರತೆಯ ನೆಲೆಯಲ್ಲಿ ವಾಘಾ ಗಡಿಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಜಮಾಯಿಸಿದ್ದ ಸಾರ್ವಜನಿಕರನ್ನು ಸೇನೆ ತೆರವುಗೊಳಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಅಭಿನಂದನ್ ಹಸ್ತಾಂತರ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇಲ್ಲ ಎಂದು ಸೇನೆ ಘೋಷಿಸಿದೆ.

ವಾಘಾ ಅಟಾರಿ ಗಡಿಗೆ ಸೇನೆಯ ಅಧಿಕಾರಿಗಳು ಈಗಾಗಲೇ ಬಂದು ವಾಸ್ತವ್ಯ ಹೂಡಿದ್ದಾರೆ. ಪ್ರತಿ ದಿನ ನಡೆಯುತ್ತಿದ್ದ ಬೀಟಿಂಗ್ ರೀಟ್ರೀಟ್ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಬೀಟಿಂಗ್ ರೀಟ್ರೀಟ್‍ಗೂ ಮೊದಲೇ ಅಭಿನಂದನ್ ಅವರನ್ನು ತಮಗೆ ಹಸ್ತಾಂತರಿಸಬೇಕೆಂದು ಭಾರತ ಪಟ್ಟು ಹಿಡಿದಿತ್ತು.

ಅಭಿನಂದನ್ ಬಿಡುಗಡೆಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿ ವಜಾ: ಭಾರತದ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಭಾರತಕ್ಕೆ ಹಸ್ತಾಂತಸಬಾರದು ಎಂದು ತಡೆಕೋರಿ ಪಾಕ್ ಸಾಮಾಜಿಕ ಕಾರ್ಯಕರ್ತರು ಪಾಕ್ ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಪಿಐಎಲ್ ಅನ್ನು ವಜಾಗೊಳಿಸಿದೆ. (ಎನ್.ಬಿ)

Leave a Reply

comments

Related Articles

error: