ಮೈಸೂರು

ಸೋಲಿನಿಂದ ಧೃತಿಗೆಡಲಿಲ್ಲ – ಹಿಡಿದ ಕಾರ್ಯ ಬಿಡಲಿಲ್ಲ : ಹೆಚ್.ಎ.ವೆಂಕಟೇಶ್

ಚುನಾವಣೆಗಳಲ್ಲಿ ಸೋಲಿನ ಮೇಲೆ ಸೋಲುಂಡರೂ ಧೃತಿಗೆಡದೆ, ಇದನ್ನೇ ಸವಾಲಾಗಿ ಸ್ವೀಕರಿಸಿ ಸಂಯಮ ತಾಳ್ಮೆಯಿಂದ ಹಿಡಿದ ಕಾರ್ಯ ಸಾಧಿಸಿದೆ ಎಂದು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಸಂತೃಪ್ತಿ ವ್ಯಕ್ತಪಡಿಸಿದರು.

ಭಾನುವಾರ ದಿ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‍ನಲ್ಲಿ ಶ್ರೀಯೋಗಿನಾರೇಯಣ ಬಣಜಿ ಸಂಘ ಮತ್ತು ಯುವಕ ಸಂಘದ ಸಂಯುಕ್ತಾಶ್ರಯವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯಲ್ಲಿ ಗೆದ್ದು ಉನ್ನತ ಸ್ಥಾನ ಗಳಿಸುವುದು ಕಷ್ಟಸಾಧ್ಯ. ಅದರಲ್ಲೂ ತಳ ಸಮುದಾಯದವರ ಏಳ್ಗೆ ಇನ್ನೂ ದುಸ್ತರವಾಗಿದೆ. ಸುಮಾರು 25 ರಾಷ್ಟ್ರಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಗೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಪರೀಕ್ಷಾ ಸಂದರ್ಭ ತನ್ನದಲ್ಲದ ತಪ್ಪಿಗಾಗಿ ವಿದ್ಯಾರ್ಥಿಯೊಬ್ಬ ಡಿಬಾರ್ ಆದ ಘಟನೆ ಹಿನ್ನೆಲೆಯಲ್ಲಿ ಸೆನೆಟ್ ಸದಸ್ಯನನ್ನು ಭೇಟಿಯಾಗಲು ತೆರಳಿದಾಗ ಆದ ಅನುಭವವೇ ನನ್ನ ಮೇಲೆ ತೀವ್ರ ಪರಿಣಾಮ ಬೀರಿತ್ತು. ಅಂದೇ ನಾನು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯನಾಗಬೇಕೆಂದು ನಿರ್ಧರಿಸಿದೆ. ಅಲ್ಲದೇ ವಿದ್ಯಾರ್ಥಿ ದಿಸೆಯಿಂದಲೂ ಕಾಲೇಜು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯನಾಗಿದ್ದೆ. ಇದರಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿತ್ತು, ನಂತರದ ದಿನಗಳಲ್ಲಿ ಚುನಾವಣೆಗಳಲ್ಲಿ ಸೋಲಿನ ಮೇಲೆ ಸೋಲು ಅನುಭವಿಸಿದರೂ ಧೃತಿಗೆಡದೆ ಸವಾಲಾಗಿ ಸ್ವೀಕರಿಸಿದೆ. 12 ವರ್ಷಗಳ ಕಾಲ ಪಕ್ಷ ಸಂಘಟನೆಯಲ್ಲಿದ್ದೆ. ರಾಜಕೀಯದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸಿರುವೆ ಎಂದ ಅವರು, ರಾಜಕೀಯವಾಗಿ ಬೆಳೆಯಬೇಕಾದರೆ ಕಾಯುವ ಗುಣ, ಸಿದ್ಧಾಂತಗಳ ಮೇಲೆ ನಂಬಿಕೆ, ಸಮಾಧಾನ, ನಾಯಕರೊಂದಿಗೆ ಸಂಯಮ, ಬುದ್ಧಿಶಕ್ತಿ ಹಾಗೂ ಜನಶಕ್ತಿ ಪ್ರದರ್ಶಿಸುವುದು ಅನಿವಾರ್ಯವೆಂದು ಸ್ವ-ಅನುಭವ ಹಂಚಿಕೊಂಡರು. ನನ್ನ ಸಮುದಾಯದವರು ಮಾಡುತ್ತಿರುವ ಸನ್ಮಾನ ಗೌರವ ನನ್ನ ಎಲ್ಲಾ ಸ್ನೇಹಿತರಿಗೆ ಸಹಪಾಠಿಗಳಿಗೆ ಸಲ್ಲುವುದು ಎಂದು ಸರಳತೆ ಮೆರೆದರು.

ಕಾರ್ಯಕ್ರಮಕ್ಕೂ ಮುನ್ನಾ ಯತೀಂದ್ರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು, ಸಂಘದ ಅಧ್ಯಕ್ಷ ಎಂ.ನಾರಾಯಣ ಅವರು ಅಧ್ಯಕ್ಷತೆ ವಹಿಸಿದ್ದರು. ಧ್ವನ್ಯಾ ಲೋಕ ಅಧ್ಯಕ್ಷ ಪ್ರೊ.ಸಿ.ಎನ್.ಶ್ರೀನಾಥ್, ಮಹಾರಾಣಿ ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ರಂಗನಾಥ, ಮಂಡ್ಯ ಘಟಕದ ಎಂ.ಎಸ್.ವೆಂಕಟೇಶ್ ಬಾಬು, ಪಿ.ಜಿ.ಶೆಟ್ಟಿ ಕನ್‍ಸ್ಟ್ರಕ್ಷನ್ಸ್ ನ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಸೋಮಶೇಖರ್,  ಸಂಕಲ್ಪ ಗ್ರೂಪ್‍ನ ವಿ.ಕೆ.ಜಗದೀಶ್ ಬಾಬು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: